ಪೊಲೀಸರ ಕ್ಷೀಪ್ರ ಕಾರ್ಯಾಚರಣೆ ಸಿಕ್ಕಿ ಬಿದ್ದ ಮಗು ಕಳ್ಳಿ

ಮಗು ಕಳ್ಳಿ
Advertisement

ಅಥಣಿ: ಸಿನಿಮಿಯ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಕಳ್ಳತನವಾಗಿದ್ದ ನವಜಾತ ಶಿಶುವನ್ನು ಘಟನೆ ನಡೆದ ಎರಡೂವರೆ ಗಂಟೆಯಲ್ಲಿ ಪತ್ತೆ ಹಚ್ಚುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆಯಷ್ಟೇ ಜನಿಸಿದ್ದ ನವಜಾತ ಗಂಡು ಮಗು ಪತ್ತೆ ಹಚ್ಚಿ ತಾಯಿಗೆ ಹಸ್ತಾಂತರಿಸುವಲ್ಲಿ ಅಥಣಿ ಮತ್ತು ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಇಂದು ಬೆಳಗಿನ ಜಾವ 10.15ಕ್ಕೆ ಸರ್ಕಾರಿ ಆಸ್ಪತ್ರೆಗೆ ನರ್ಸ್ ವೇಷಧಾರಿಯಾಗಿ ಆಗಮಿಸಿದ್ದ ಓರ್ವ ಮಹಿಳೆ ಮತ್ತು ಅವರ ತಂಡ ನೇರವಾಗಿ ಆಸ್ಪತ್ರೆಯ ವಾರ್ಡ್‌ಗೆ ತೆರಳಿ ಎಲ್ಲ ಬಾಣಂತಿಯರು ತಾಯಿ ಕಾರ್ಡ್ ಹಾಗೂ ಆಧಾರ ಕಾರ್ಡ್ ಝೆರಾಕ್ಸ್ ಕೊಡಬೇಕು ಎಂದು ಹೇಳಿ ಗಮನ ಬೇರೆಡೆ ಸೆಳೆದು ಅಂಬಿಕಾ ಅಮೀತ ಭೋವಿ ಎಂಬ ಬಾಣಂತಿಯ ಮಗುವನ್ನು ತೂಕ ಮಾಡಿ ಕೊಡುವುದಾಗಿ ಹೇಳಿ ವಾರ್ಡ್‌ನಿಂದ ಹೊರಗೆ ತೆಗೆದುಕೊಂಡು ಹೋಗಿದ್ದಳು. ಅರ್ಧ ಗಂಟೆಯಾದರೂ ಮಗುವನ್ನು ಮರಳಿ ಕೊಡದೇ ಇದ್ದಾಗ ಆಸ್ಪತ್ರೆಯಲ್ಲಿ ವಿಷಯ ತಿಳಿದು ಅಥಣಿ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಿದ ಪೊಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.