ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಸಿದ್ಧತೆ

ಪೊಲೀಸ್‌
Advertisement

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದೆ. ಮೂರು ನಾಲ್ಕು ವರ್ಷಗಳಿಂದ ಒಂದೇ ಕಡೆ ಠಿಕಾಣಿ ಹೂಡಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.
ಕೆಲ ದಿನಗಳ ಹಿಂದಷ್ಟೇ ೩೩ ಡಿವೈಎಸ್ಪಿ ಹಾಗೂ ೧೩೨ ಇನ್ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೆ ೧೩ ಡಿವೈಎಸ್‌ಪಿ ಹಾಗೂ ೩೦ ಇನ್ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ಬರೋಬ್ಬರಿ ೨೧೮ ಪಿಎಸ್‌ಐಗಳ ವರ್ಗಾವಣೆಯಾಗಿದ್ದು, ಐವರು ಇನ್ಸ್ಪೆಕ್ಟರ್‌ಗಳ ವರ್ಗಾವಣೆಯನ್ನು ರದ್ದು ಮಾಡಲಾಗಿದೆ. ಕೆಲವು ಇನ್ಸ್ಪೆಕ್ಟರ್‌ಗಳ ಸ್ಥಳ ಬದಲಾವಣೆ ಮಾಡಲಾಗಿದೆ.
ವರ್ಗಾವಣೆಯಾಗಿರುವ ಡಿವೈಎಸ್ಪಿ ಶೇಖರ್.ಜಿ ಅವರನ್ನು ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆಗೆ, ಶಿವಕುಮಾರ್.ಪಿ- ಬೈಯಪ್ಪನಹಳ್ಳಿ ಠಾಣೆ, ಸತೀಶ್ ಕುಮಾರ್-ಗಿರಿನಗರ ಠಾಣೆ, ಯೇರಿಸ್ವಾಮಿ.ಈ- ಕಾಟನ್ ಪೇಟೆ, ತಿಪ್ಪೇಸ್ವಾಮಿ ಬಿ.ಎಂ-ಆನೇಕಲ್ ಠಾಣೆ, ಸತೀಶ್.ಬಿ.ಎಸ್- ಪರಪ್ಪನ ಅಗ್ರಹಾರ, ಗೋವಿಂದರಾಜು-ಪುಲಕೇಶಿ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈ ಏಳು ಜನ ಅಧಿಕಾರಿಗಳು ಸೇರಿದಂತೆ ೨೫ ಇನ್ಸ್ಪೆಕ್ಟರ್‌ಗಳನ್ನು ವಿವಿಧ ಕಡೆ ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಐವರು ಇನ್ಸ್ಪೆಕ್ಟರ್‌ಗಳಾದ ನರೇಂದ್ರ ಬಾಬು ಅವರನ್ನು ಸಿಐಡಿಯಿಂದ ಕಾಟನ್‌ಪೇಟೆಗೆ, ಐಯಣ್ಣ ರೆಡ್ಡಿ.ಬಿ. ಹೆಬ್ಬಗೋಡಿಯಿಂದ ವರ್ಗಾವಣೆ, ಮುನಿರೆಡ್ಡಿ.ವಿ. ಪರಪ್ಪನ ಅಗ್ರಹಾರ, ಸುಬ್ರಮಣ್ಯ ಸ್ವಾಮಿ ಎಂ.ಎಲ್. ವಿವಿ ಪುರಂ ಸಂಚಾರ ಠಾಣೆ, ಮುನಿಕೃಷ್ಣ ಡಿ.ಎಚ್. ಮಾಸ್ತಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದವರ ಆದೇಶ ರದ್ದು ಮಾಡಲಾಗಿದೆ.
ವರ್ಗಾವಣೆಗೆ ಲಾಬಿ
ಪೊಲೀಸ್ ಅಧಿಕಾರಿಗಳು ತಮಗೆ ಬೇಕಾದ ಠಾಣೆ, ಜಿಲ್ಲೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ದೊಡ್ಡ ಮಟ್ಟದ ಲಾಬಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ವರ್ಗಾವಣೆಗೊಂಡಿರುವ ಇನ್ಸ್ಪೆಕ್ಟರ್, ಡಿವೈಎಸ್‌ಪಿ, ಸಿಪಿಐ ಸೇರಿದಂತೆ ಇತರೆ ವಿಭಾಗದ ಅಧಿಕಾರಿಗಳು ಈಗ ಜನಪ್ರತಿನಿಧಿಗಳ ದುಂಬಾಲು ಬಿದ್ದಿದ್ದಾರೆ. ಸೇವೆ ಸಲ್ಲಿಸಿರುವ ಠಾಣೆ ವ್ಯಾಪ್ತಿಯ ಶಾಸಕರು, ಸಚಿವರ ಮೇಲೆ ಒತ್ತಡ ಹೇರುವ ಮೂಲಕ ವರ್ಗಾವಣೆ ಮಾಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಕೆಲವರು ಜಾತಿ, ಸಮುದಾಯದ ಹೆಸರಿನಲ್ಲಿ ರಾಜಕಾರಣಿಗಳನ್ನು ಭೇಟಿ ಮಾಡುತ್ತಿದ್ದಾರೆ. ಕರ್ತವ್ಯಲೋಪ, ಅಮಾನತ್ತುಗೊಂಡಿರುವ ಅಧಿಕಾರಿಗಳು ಪುನಃ ಕರ್ತವ್ಯಕ್ಕೆ ಹಾಜರಾಗಲು ಪ್ರಯತ್ನ ನಡೆಸಿದ್ದಾರೆ.