ಪೊಲೀಸ್ ಇಲಾಖೆ ಎಲ್ಲಾ ವಾಹನಗಳಿಗಿದೆ ಇನ್ಸೂರೆನ್ಸ್

Advertisement

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಇಲಾಖೆಯ ಗಸ್ತು ವಾಹನಕ್ಕೆ ಇನ್ಸೂರೆನ್ಸ್ ಇಲ್ಲ ಎಂದು ಸಾರ್ವಜನಿಕರೊಬ್ಬರು ಪೊಲೀಸ ಸಿಬ್ಬಂದಿಗಳ ಜೊತೆ ವಾಗ್ವಾದ ತೆಗೆದ ವಿಡಿಯೋ ವೈರಲ್ ಆಗಿದೆ.
ಇದೀಗ ಈ ವೈರಲ್ ವಿಡಿಯೋ ಸಂಬಂಧ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಎಲ್ಲಾ ಪೊಲೀಸ್ ಇಲಾಖೆಯ ವಾಹನಗಳು ಕರ್ನಾಟಕ ಗವರ್ನಮೆಂಟ್ ಇನ್ಯುರೆನ್ಸ್ ಡಿಪಾರ್ಟ್‌ಮೆಂಟ್ (ಕೆ.ಜಿ.ಐ.ಡಿ) ವಿಮೆಯನ್ನು ಕಡ್ಡಾಯವಾಗಿ ಹೊಂದಿರುತ್ತದೆ ಎಂದು ತಿಳಿಸಿದ್ದಾರೆ. ನಿನ್ನೆ ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಹೆದ್ದಾರಿ ಗಸ್ತು ವಾಹನದ ವೀಡಿಯೋ ಚಿತ್ರೀಕರಿಸಿದ ಸಾರ್ವಜನಿಕರೊಬ್ಬರು ಈ ವಾಹನದ ವಿಮಾ ಅವಧಿಯು ಮುಕ್ತಾಯವಾಗಿರುವುದಾಗಿಯೂ, ಪೊಲೀಸ್ ಇಲಾಖೆಯು ವಿಮಾ ಕಂತು ಪಾವತಿಸದ ವಾಹನಗಳನ್ನು ಬಳಸುತ್ತಿರುವುದಾಗಿ ಹೇಳಿರುವ ವಿಡಿಯೋ ವೈರಲ್ ಆಗಿತ್ತು.
ಇದೀಗ ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳೂ ಕರ್ನಾಟಕ ಗವರ್ನಮೆಂಟ್ ಇನ್ಯುರೆನ್ಸ್ ಡಿಪಾರ್ಟ್ಮೆಂಟ್ (ಕೆ.ಜಿ.ಐ.ಡಿ) ವಿಮೆಯನ್ನು ಕಡ್ಡಾಯವಾಗಿ ಹೊಂದಿರುತ್ತದೆ ಹಾಗೂ ವಿಮೆಯನ್ನು ಕಾಲ ಕಾಲಕ್ಕೆ ನವೀಕರಿಸಲಾಗುತ್ತದೆ. ವಿಮೆ ನವೀಕರಣಗೊಳ್ಳದ ಯಾವುದೇ ಇಲಾಖಾ ವಾಹನಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತೋರಿಸಲಾದ ಇಲಾಖಾ ಹೆದ್ದಾರಿ ಗಸ್ತು ವಾಹನದ ವಿಮಾ ಅವಧಿಯು ದಿನಾಂಕ: ೧೩-೧೦-೨೦೨೫ ರ ತನಕ ಮತ್ತು ವಾಹನದ ಮಾಲಿನ್ಯ ತಪಾಸಣಾ ಅವಧಿಯು ದಿನಾಂಕ: ೦೮-೦೧-೨೦೨೫ ರ ತನಕ ಚಾಲ್ತಿಯಲ್ಲಿ ಇರುತ್ತದೆ ಎಂದು ತಿಳಿಸಿದ್ದಾರೆ. ಈ ವೈರಲ್ ವಿಡಿಯೋಗೆ ಕಾರಣವಾಗಿದ್ದ ವ್ಯಕ್ತಿಯು ತನ್ನ ಬೈಕ್ ಗೆ ವಾಯುಮಾಲಿನ್ಯ ಪತ್ರ ಹೊಂದದ ಕಾರಣ ರೂ. ೫೦೦ ದಂಡ ವಿಧಿಸಿದ್ದಾರೆ.