ಪೊಲೀಸ್ ಠಾಣೆ ಸಮೀಪವೇ ಯುವಕನ ಬರ್ಬರ ಹತ್ಯೆ

Advertisement

ದಾವಣಗೆರೆ: ದೇವಸ್ಥಾನದ ಜಮೀನಿನ ವಿಚಾರಕ್ಕೆ ಸಂಬಂಧಪಟ್ಟಂತೆ ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಕೂಗಳತೆ ದೂರದ ನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇಲ್ಲಿನ ಗಾಂಧಿ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ತಾಲೂಕಿನ ಕಿತ್ತೂರು ಗ್ರಾಮದ ಮೈಲಾರಿ(೨೮ ವರ್ಷ) ಕೊಲೆಯಾದ ಯುವಕ. ಗ್ರಾಮದ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನದ ೬ ಎಕರೆ ಗೋಮಾಳ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಗಾಂಧಿ ನಗರದ ೬ನೇ ಕ್ರಾಸ್‌ನಲ್ಲಿ ಮೂವರು ವ್ಯಕ್ತಿಗಳು ಹರಿತವಾದ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಕಿತ್ತೂರು ಗ್ರಾಮದ ದೇವಸ್ಥಾನದ ಜಮೀನು ವಿಚಾರಕ್ಕೆ ಮೈಲಾರಿ ಹಾಗೂ ಇನ್ನೊಂದು ಗುಂಪಿನ ಮಧ್ಯೆ ಜಗಳ ನಡೆದಿದೆ. ಜಮೀನಿನಲ್ಲಿ ತಮ್ಮ ಪಾಲು ಇದೆಯೆಂಬ ಕಾರಣಕ್ಕೆ ಪದೇಪದೇ ಜಗಳವಾಗುತ್ತಿತ್ತು. ಮೃತ ಮೈಲಾರಿ ಕಿತ್ತೂರು ಗ್ರಾಮದಲ್ಲಿ ಇರಲಿಲ್ಲ. ದಾವಣಗೆರೆ ಗಾಂಧಿ ನಗರದಲ್ಲಿ ಇದ್ದು, ಕಾರ್ಮಿಕರನ್ನು ಪೂರೈಸುವ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ದುಷ್ಕರ್ಮಿಗಳು ಆತನನ್ನು ಇರಿದು ಕೊಲೆ ಮಾಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೈಲಾರಿಯನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದಾನೆ.
ಮೈಲಾರಿಯನ್ನು ಮಲ್ಲೇಶ್, ಮೂರ್ತೆಪ್ಪ ಹಾಗೂ ರಕ್ಷಿತಾ ಎಂಬುವರು ಸೇರಿದಂತೆ ೭ ಮಂದಿ ಸೇರಿ, ಕೊಲೆ ಮಾಡಿದ್ದಾರೆ ಎಂಬುದಾಗಿ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ಜಿಲ್ಲಾ ಆಸ್ಪತ್ರೆ ಶವಾಗಾರದ ಬಳಿ ಮೈಲಾರಿ ಹಂತಕರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಕುಟುಂಬಸ್ಥರು, ಸ್ನೇಹಿತರು ಪ್ರತಿಭಟನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.