ಪೋಕ್ಸೋ ಕೇಸ್‌: ತಾಯಿ ಸೇರಿ ನಾಲ್ವರಿಗೆ 20 ವರ್ಷ ಕಠಿಣ ಶಿಕ್ಷೆ

Advertisement

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯ ತಾಯಿ ಸೇರಿದಂತೆ ನಾಲ್ವರಿಗೆ ಇಲ್ಲಿನ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ತಲಾ 25 ಸಾವಿರ ರು. ದಂಡ ಹಾಗೂ 20 ವರ್ಷ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಬಾಲಕಿಯ ತಾಯಿ ಗೀತಾ, ಗಿರೀಶ್ , ದೇವಿಶರಣ್ ಅವರಿಗೆ ತಲಾ 25 ಸಾವಿರ ರು. ದಂಡ ಹಾಗೂ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದರೆ, ಅಭಿನಂದನ್ ಅಲಿಯಾಸ್ ಸ್ಮಾಲ್ ಅಭಿಗೆ 25 ಸಾವಿರ ರು. ದಂಡ ಹಾಗೂ 22 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯ ಮೇಲೆ 2020ರ ಸೆಪ್ಟಂಬರ್‌ ನಿಂದ 2021ರ ಜನವರಿಗೆ ಬ್ಲಾಕ್‌ ಮೇಲ್‌ ಮಾಡಿ ಕೃತ್ಯವನ್ನು ಎಸಗಿದ್ದಾರೆ. ಆರಂಭದಲ್ಲಿ ತಾಯಿಯೇ ಬಲವಂತವಾಗಿ ಮಗಳನ್ನು ಈ ದಂಧೆಗೆ ಇಳಿಸಿದ್ದರೆನ್ನಲಾಗಿದ್ದು, ಈ ಪರಿಸ್ಥಿತಿಯ ದುರುಪಯೋಗ ಪಡೆದುಕೊಂಡು ಬಾಲಕಿಯನ್ನು ಬ್ಲಾಕ್ ಮೇಲ್‌ ಮಾಡಿ ಅತ್ಯಾಚಾರ ನಡೆಸಿದ್ದರು.
ಈ ಸಂಬಂಧ ಮಕ್ಕಳ ಹಕ್ಕು ರಕ್ಷಣಾ ಸಮಿತಿಯ ದೂರಿನ ಮೇರೆಗೆ 2021ರ ಜನವರಿ 27 ರಂದು ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ತಾಯಿ ಗೀತಾ ಸೇರಿದಂತೆ 53 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 49 ಆರೋಪಿಗಳನ್ನು ಬಿಡುಗಡೆಗೊಳಿಸಿ, ಇನ್ನುಳಿಂದ ನಾಲ್ವರಿಗೆ ಶಿಕ್ಷೆ ವಿಧಿಸಿ
ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಾಂತಣ್ಣ ಆಳ್ವ ಆವರು ಸೋಮವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದರು.