ಪೋಲಾಗುತ್ತಿದೆ ಅನ್ನದಾತರ ತೆರಿಗೆ ಹಣ…!

Advertisement

ಬೆಳಗಾವಿ: ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ಜಲವಿವಾದ ನ್ಯಾಯಾಧಿಕರಣಗಳ ವಿಚಾರಣೆ ಸಮಯದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಲು ಹಾಜರಾಗಿದ್ದ ವಕೀಲರುಗಳಿಗೆ ಶುಲ್ಕವಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ ಬರೋಬ್ಬರಿ ೧೨೨,೭೫,೯೫,೮೮೨ ರೂ.ಗಳನ್ನು ಪಾವತಿಸಿರುವ ಅಂಶವು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿಯಿಂದ ಬೆಳಕಿಗೆ ಬಂದಿದೆ.
ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಅವರು ಈ ಕುರಿತಂತೆ ಮಾಧ್ಯಮಗಳಿಗೆ ಲಿಖಿತ ಹೇಳಿಕೆ ನೀಡಿದ್ದಾರೆ, ರಾಜ್ಯದ ಪರವಾಗಿ ವಾದ ಮಂಡಿಸಲು ನೇಮಕ ಮಾಡಿಕೊಂಡಿರುವ ವಕೀಲರಲ್ಲಿ ಹೆಚ್ಚಿನ ಸಂಖ್ಯೆಯ ವಕೀಲರು ಕೇರಳ, ತಮಿಳನಾಡು ಮತ್ತು ಪುದುಚೇರಿ ಮೂಲದವರಾಗಿದ್ದಾರೆ. ಇವರು ರಾಜ್ಯದ ಸದ್ಯದ ನೀರಿನ ವಾಸ್ತವತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದ್ದಾರೆಂದು ಗಡಾದ್ ಆರೋಪಿಸಿದ್ದಾರೆ.
೧೯೯೧-೯೨ರಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಕಾವೇರಿ ಜಲವಿವಾದದ ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವಂತೆ ನೀಡಿದ್ದ ತೀರ್ಪಿಗೆ ವ್ಯತಿರಿಕ್ತವಾಗಿ ಸುಗ್ರೀವಾಜ್ಞೆ ಹೊರಡಿಸುವುದರ ಮೂಲಕ ರಾಜ್ಯದ ರೈತರ ಹಿತವನ್ನು ಕಾಪಾಡುವುದಕ್ಕೆ ಬದ್ಧರಾಗಿದ್ದರು. ಆದರೆ ಜಲವಿವಾದಗಳ ವಿಷಯದಲ್ಲಿ ಬಂಗಾರಪ್ಪನವರಂತಹ ಮತ್ತೊಬ್ಬ ಮುಖ್ಯಮಂತ್ರಿಯನ್ನು ನಂತರದ ವರ್ಷಗಳಲ್ಲಿ ಈ ರಾಜ್ಯ ಕಂಡಿಲ್ಲ.
ತಮಿಳುನಾಡು ಮೂರನೇ ಭತ್ತದ ಬೆಳೆಯಾದ ಕುರುವೈ ಬೆಳೆಗೆ ನೀರನ್ನು ಕೇಳುತ್ತಿರುವುದು ಮತ್ತು ಅದಕ್ಕೆ ನಮ್ಮ ಸರ್ಕಾರ ಸ್ಪಂದಿಸುತ್ತಿರುವುದು ಎಷ್ಟು ಸಮಂಜಸವಾಗಿದೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು ಕಾವೇರಿ, ಕೃಷ್ಣಾ ಮತ್ತು ಮಹದಾಯಿ ವಿಷಯಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ. ಈ ನಾಡಿನ ಅನ್ನದಾತರ ಹಾಗೂ ಜನರ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆಗೊಳಿಸಲು ಸಾಕಷ್ಟು ಅನುದಾನ ಇಡದೇ ಕೇವಲ ಪುಕ್ಕಟೆ ಪ್ರಚಾರಕ್ಕಾಗಿ ಈಗಿನ ಕಾಂಗ್ರೇಸ್ ಸರ್ಕಾರ ೬೦ ಸಾವಿರ ಕೋಟಿ ಮೀಸಲಿಡುವ ಮೂಲಕ ನಾಡಿನ ಜನರಿಗೆ ದ್ರೋಹ ಬಗೆದಿದೆ ಎಂದು ಅವರು ದೂರಿದರು.
ಕಾವೇರಿ ನ್ಯಾಯಾಧಿಕರಣ:
ಕರ್ನಾಟಕ, ತಮಿಳನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವೆ ಉದ್ಭವಿಸಿದ ಅಂತರಾಜ್ಯ ಜಲವಿವಾದದ ಇತ್ಯರ್ಥಕ್ಕಾಗಿ ೧೯೯೦ ಜೂನ್ ೨ ರಂದು ಕಾವೇರಿ ಜಲವಿವಾದ ನ್ಯಾಯಾಧಿಕರಣವನ್ನು ರಚಿಸಲಾಗಿದೆ.
ಪ್ರಾರಂಭದಿಂದ ದಿ: ೨೦೧೭ ಜುಲೈ ೧೦ ರವರೆಗೆ ಒಟ್ಟು ೫೮೦ ಸಿಟ್ಟಿಂಗ್‌ಗಳು ನಡೆದಿವೆ ಮತ್ತು ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರ ಶುಲ್ಕವಾಗಿ ೫೪,೧೩,೨೧,೨೮೨ ರೂ.ಗಳನ್ನು ಪಾವತಿಸಲಾಗಿದೆ ಎಂದು ಗಡಾದ್ ಮಾಹಿತಿ ನೀಡಿದ್ದಾರೆ.
ಕೃಷ್ಣಾ ನ್ಯಾಯಾಧಿಕರಣ:
ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ರಾಜ್ಯಗಳ ನಡುವೆ ಉದ್ಭವಿಸಿದ ಅಂತರಾಜ್ಯ ಜಲವಿವಾದದ ಇತ್ಯರ್ಥಕ್ಕಾಗಿ ೨೦೦೪ ಏಪ್ರಿಲ್ ೨ರಂದು ಕೃಷ್ಣಾ ಜಲವಿವಾದ ನ್ಯಾಯಾಧಿಕರಣವನ್ನು ರಚಿಸಲಾಗಿದೆ.
ಪ್ರಾರಂಭದಿಂದ ೨೦೧೩ ನವೆಂಬರ್ ೨೯ ರವರೆಗೆ ಒಟ್ಟು ೨೯೫ ಸಿಟ್ಟಿಂಗ್‌ಗಳು ನಡೆದಿವೆ. ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರಿಗೆ ೪೩,೨೪,೩೯,೦೦೦ ರೂ. ಶುಲ್ಕ ಪಾವತಿಸಲಾಗಿದೆ.
ಮಹದಾಯಿ ನ್ಯಾಯಾಧಿಕರಣ
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟç ರಾಜ್ಯಗಳ ನಡುವೆ ಉದ್ಭವಿಸಿದ ಅಂತರಾಜ್ಯ ಜಲವಿವಾದದ ಇತ್ಯರ್ಥಕ್ಕಾಗಿ ೨೦೧೦ ನವೆಂಬರ್ ೧೬ ರಂದು ಮಹದಾಯಿ ಜಲವಿವಾದ ನ್ಯಾಯಾಧಿಕರಣವನ್ನು ರಚಿಸಲಾಗಿದೆ.
ಪ್ರಾರಂಭದಿಂದ ೨೦೧೭ ಡಿಸೆಂಬರ್ ೧ ರವರೆಗೆ ಒಟ್ಟು ೯೭ ಸಿಟ್ಟಿಂಗ್‌ಗಳು ನಡೆದಿವೆ ಮತ್ತು ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರುಗಳ ಶುಲ್ಕಕ್ಕಾಗಿ ೨೫,೩೮,೩೫,೬೦೦ ರೂ. ವೆಚ್ಚ ಮಾಡಲಾಗಿದೆ ಎಂದು ಗಡಾದ್ ತಿಳಿಸಿದ್ದಾರೆ.