ಪೋಸ್ಟ್‌ ಕಾರ್ಡ್ ಅಭಿಯಾನಕ್ಕೆ ಚಾಲನೆ

Advertisement

ಮಂಗಳೂರು: ತುಳು‌ ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸಲು ಆಗ್ರಹಿಸಿ ಮಾಜಿ ಶಾಸಕ ಮೊಯಿದ್ದೀನ್ ಬಾವರಿಂದ ಇಂದಿನಿಂದ ಫೆ. ೨ರ ವರೆಗೆ ವಿನೂತನ ಪೋಸ್ಟ್‌ ಕಾರ್ಡ್ ಅಭಿಯಾನ ಹಮ್ಮಿಕೊಳ್ಳಲಾಯಿತು. ಈ ಅಭಿಯಾನಕ್ಕೆ ಮಂಗಳೂರಿನ ಹಂಪನ್ ಕಟ್ಟ ಶಾಖೆಯಿಂದ ಕರ್ನಾಟಕ ಸಿಎಂ, ಭಾರತದ ಪ್ರಧಾನ ಮಂತ್ರಿ, ಕೇರಳ ಸಿಎಂಗೆ ಮೊದಲ ಪತ್ರವನ್ನು ರಿಜಿಸ್ಟರ್ ಪೋಸ್ಟ್ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಮಾತನಾಡಿ, ಈ ಅಭಿಯಾನದ ಮೂಲಕ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸಲು ಸರ್ಕಾರಕ್ಕೆ ಆಗ್ರಹಿಸಲಿದ್ದೇವೆ ಮುಂದಿನ ಬಜೆಟ್ ವೇಳೆ ಕೇಂದ್ರದೊಂದಿಗೆ ಮಾತುಕತೆ ನಡೆಸಿ ಅಧಿಕೃತ ಭಾಷೆಯಾಗಿ ೮ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಿ ಆದೇಶ ಹೊರಡಿಸಬೇಕು. ಮಾತ್ರವಲ್ಲದೆ ಈ ಅಭಿಯಾನಕ್ಕೆ ಈಗಾಗಲೇ ಅನೇಕರು ದೇಶ ವಿದೇಶಗಳಿಂದ ಸಹಕಾರ ಸೂಚಿಸಿದ್ದಾರೆ. ತುಳುನಾಡಿನ ಜನರು ಉತ್ತಮ ಸ್ಪಂದನೆ ನೀಡುವ ಮೂಲಕ ಅಭಿಯಾನದ ಯಶಸ್ವಿ ಮತ್ತು ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿಸಲು ಸಹಕರಿಸಬೇಕು. ಇಂದಿನಿಂದ ಫೆ. ೨ವರೆಗೆ ನಡೆಯಲಿರುವ ಅಭಿಯಾನದಲ್ಲಿ ಪ್ರಧಾನಿಗೆ ಕನಿಷ್ಟ ೧೦ ಸಾವಿರ ಪತ್ರ, ಸಿಎಂ ಅವರಿಗೆ ೧೦ ಸಾವಿರ ಪತ್ರ ರವಾನೆಗೆ ಆಗಬೇಕೆಂದು ಆಗ್ರಹಿಸಿದ್ದಾರೆ. ಈ ವೇಳೆ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಭಾರತಿ ಪಚ್ಚನಾಡಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಉಮೇಶ್ ದಂಡಕೇರಿ, ಪ್ರಶಾಂತ್ ಭಟ್ ಕಡಬ ಹಾರಿಸ್ ಬೈಕಂಪಾಡಿ, ಅಸಿಫ್ ಚೊಕ್ಕಬೆಟ್ಟು, ರಹೀಮ್ ಮಲ್ಲೂರು, ಹನೀಫ್ ಮಲ್ಲೂರು, ನೌಫಲ್ ಉದ್ದಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.