ಪೌರತ್ವ ಕಾಯ್ದೆ ರದ್ದು-ಯಾರಿಗೂ ಸಾಧ್ಯವಿಲ್ಲ

Advertisement

ಅಜಂಗಢ: ಪೌರತ್ವ ತಿದ್ದುಪಡಿ ಕಾಯ್ದೆಯಡಿ ವಲಸಿಗರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದು, ಇದನ್ನು ರದ್ದುಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಸಮಾಜವಾದಿ ಪಕ್ಷದ ಭದ್ರಕೋಟೆಯಾದ ಅಜಂಗಢದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ದೇಶದ ಪಶ್ಚಿಮ ಬಂಗಾಳದಿಂದ ಕಾಶ್ಮೀರದವರೆಗೆ ನಿರಾಶ್ರಿತರಾಗಿ ಬದುಕುತ್ತಿರುವ ಸಂತ್ರಸ್ತರಿಗೆ ಈಗ ಭಾರತೀಯ ಪೌರತ್ವ ಸಿಗತೊಡಗಿದೆ. ಈ ಸಂತ್ರಸ್ತರು ಬಹುತೇಕ ಒಬಿಸಿ ಮತ್ತು ಹಿಂದುಳಿದ ಜಾತಿಗಳಿಗೆ ಸೇರಿದವರು. ನೆರೆಯ ದೇಶಗಳಲ್ಲಿ ದೌರ್ಜನ್ಯಕ್ಕೆ ತುತ್ತಾಗಿ ಬಂದಿದ್ದಾರೆ. ಆದರೆ ಇಷ್ಟು ವರ್ಷ ಕಾಂಗ್ರೆಸ್ ತುಷ್ಠೀಕರಣ ರಾಜನೀತಿ ನಡೆಸಿ, ಅನಾಥರಂತೆ ಬದುಕುತ್ತಿದ್ದ ಈ ಸಂತ್ರಸ್ತರಿಗೆ ಪೌರತ್ವ ಸಿಗದಂತೆ ನೋಡಿಕೊಂಡಿತು ಎಂದು ಗಂಭೀರ ಆರೋಪ ಮಾಡಿದರು. ಮುಂಬರುವ ದಿನಗಳಲ್ಲಿ ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳಗಳ ಸಾವಿರಾರು ನಿರಾಶ್ರಿತ ಕುಟುಂಬಗಳು ಭಾರತದ ನಾಗರಿಕತ್ವ ಪಡೆಯಲಿವೆ ಎಂದು ಘೋಷಿಸಿದರು.
ಸ್ವಾತಂತ್ರ‍್ಯದ ನಂತರ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ಸೇ ದೇಶದ ಎಲ್ಲಾ ಸಮಸ್ಯೆಗಳಿಗೆ ಮೂಲ ಎಂದು ಪ್ರಧಾನಿ ಮೋದಿ ಆರೋಪಿಸಿದರು. ತುಷ್ಟೀಕರಣದ ವಿಚಾರದಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಈ ಹಿಂದೆ ದೇಶದಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ಸ್ಫೋಟಗಳಿಗೆ ಅಜಂಗಢದ ಹೆಸರು ತಳುಕು ಹಾಕಿಕೊಂಡಿತ್ತು. ಅಜಂಗಢಕ್ಕೆ ಅಂಟಿರುವ ಈ ಕಳಂಕವನ್ನು ಬದಲಾಯಿಸಬೇಕಾಗಿದೆ ಎಂದರು.