ಪ್ರತಿಭಟನಾ ನಿರತ ಕುಸ್ತಿಪಟುಗಳು, ಪೊಲೀಸರ ನಡುವೆ ಸಂಘರ್ಷ

Advertisement

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಈಗ ಪೊಲೀಸರು ಕುಸ್ತಿಪಟುಗಳ ಮೇಲೆ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಪೊಲೀಸರ ವರ್ತನೆಗೆ ಮಧ್ಯರಾತ್ರಿಯೇ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಒಲಿಂಪಿಯನ್ ವಿನೇಶ್ ಫೋಗಟ್‌, ಇಂತಹ ದಿನಗಳನ್ನು ನೋಡಲು ನಾವು ರಾಷ್ಟ್ರಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆಯೇ? ಕಾನ್ಸ್‌ಟೇಬಲ್‌ ನಮ್ಮನ್ನು ಹಿಡಿದು ತಳ್ಳುವಾಗ ಮಹಿಳಾ ಪೊಲೀಸರು ಎಲ್ಲಿದ್ದರು? ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ರಾಷ್ಟ್ರಕ್ಕಾಗಿ ಪದಕ ಗೆದ್ದಿರುವ ಕ್ರೀಡಾಪಟುಗಳ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ನಡೆಯನ್ನು ಖಂಡಿಸಿ ನಾನು ಗೆದ್ದಿರುವ ಎಲ್ಲಾ ಪದಕಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ವಿನಂತಿಸುತ್ತೇನೆ ಎಂದು ಆಕ್ರೋಶದಿಂದ ಹೇಳಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ತಮ್ಮ ಮಡಚಿದ ಹಾಸಿಗೆಗಳನ್ನು ತರಲು ಯತ್ನಿಸಿದಾಗ ಪೊಲೀಸರು ಹಲ್ಲೆ ನಡೆಸಿದರು ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಅನೇಕ ಕುಸ್ತಿಪಟುಗಳ ತಲೆಗೆ ಏಟು ಬಿದ್ದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಓರ್ವ ಕುಸ್ತಿಪಟು ಪ್ರಜ್ಞೆ ತಪ್ಪಿ ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.