ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬಲ್ಲ

Advertisement

ಮೈಸೂರು : ಬಿಜೆಪಿಯವರು ಯಾವುದೇ ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಮೈಸೂರಿನಲ್ಲಿ ಮಾತನಾಡಿದ ಅವರು ಆದಾಯ ತೆರಿಗೆ ಇಲಾಖೆ ತನ್ನ ಕೆಲಸ ಮಾಡಿದೆ. ಯಾರೊ ಗುತ್ತಿಗೆದಾರನ ಮನೆಯಲ್ಲಿ ಹಣ ಪತ್ತೆಯಾಗಿದ್ದರೆ ಅದಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಲೋಕಸಭೆ ಚುನಾವಣೆ ಹಾಗೂ ರಾಜಕೀಯ ಉದ್ದೇಶದಿಂದ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಯಾವುದೇ ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವ ತನಿಖೆಯನ್ನು ನಡೆಸುವ ಅವಶ್ಯಕತೆಯಿಲ್ಲ. ದಾಳಿ ಮಾಡಿದವರು ಆದಾಯ ತೆರಿಗೆ ಇಲಾಖೆಯವರು, ತನಿಖೆಯನ್ನೂ ಅವರೇ ಮಾಡುತ್ತಾರೆ.
ಪಂಚರಾಜ್ಯಗಳ ಚುನಾವಣೆಯ ಇರುವುದರಿಂದ ಸೋಲಿನ ಭಯಕ್ಕಾಗಿ ನಮ್ಮ ಮೇಲೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಚುನಾವಣೆ ನಡೆಯುವುದಕ್ಕೂ ನಮ್ಮ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ. ರಾಜ್ಯದಲ್ಲಿ ವಿದ್ಯುತ್ ಕೊರತೆಗೆ ಹಿಂದಿನ ಸರ್ಕಾರಗಳು ಕಾರಣ. 2013-18ರ ನಮ್ಮ‌ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ದುಪ್ಪಟ್ಟಾದುದ್ದು ಹೊರತುಪಡಿಸಿದರೆ, ನಂತರದ ಬಿಜೆಪಿ ಅಥವಾ ಕುಮಾರಸ್ವಾಮಿ ಅವರ ಅವಧಿಯಲ್ಲಿ ಒಂದೇ ಒಂದು ಮೆ.ವ್ಯಾಟ್ ವಿದ್ಯುತ್ತ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡಿಲ್ಲ. ಮಳೆ ಅಭಾವದಿಂದಾಗಿ ಪಂಪಸೆಟ್‌ಗಳಿಗೆ ವಿದ್ಯುತ್ ವ್ಯತ್ಯಯವಾಗಿದೆ. ಸಾಧಾರಣವಾಗಿ, ಅಕ್ಟೋಬರ್ ಮಾಹೆಯವರೆಗೆ 10,000 ಮೆ.ವ್ಯಾ ವಿದ್ಯುತ್ ಖರ್ಚಾಗುತ್ತಿತ್ತು. ಆದರೆ ಈ ಬಾರಿ 16,000 ಮೆ.ವ್ಯಾಟ್ ಖರ್ಚಾಗುತ್ತಿದೆ. ಸುಮಾರು 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಆದ್ದರಿಂದ ವಿದ್ಯುತ್ ಸಮಸ್ಯೆ ತಲೆದೋರಿರುವುದು ನಿಜ. ಈ ಬಗ್ಗೆ ಸಭೆ ನಡೆಸಿ, ರೈತರಿಗೆ ಮೂರು ಫೇಸ್ ಗಳಲ್ಲಿ 5 ಗಂಟೆಗಳ ಕಾಲ ಸತತ ವಿದ್ಯುತ್ ನೀಡಬೇಕು, ಹೊರಗಿನಿಂದ ವಿದ್ಯುತ್ ಖರೀದಿಸಲು ಸೂಚನೆ ನೀಡಲಾಗಿದೆ. ಕಬ್ಬು ಅರೆಯುವಿಕೆಯಿಂದ ವಿದ್ಯುತ್ ಕೋ ಜನರೇಷನ್‌ನತ್ತಲೂ ಗಮನ ಹರಿಸಲು ಸೂಚಿಸಲಾಗಿದೆ. ಲೋಡ್ ಶೆಡ್ಡಿಂಗ್ ನಿಂದ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಮೇವಿನ ಕೊರತೆಯಿಲ್ಲ. ಆದರೂ ಮೇವು ಬೆಳೆಸಲು ಹಾಗೂ ಶೇಖರಣೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ. 236 ತಾಲ್ಲೂಕುಗಳ ಪೈಕಿ 216 ತಾಲ್ಲೂಕುಗಳು ಬರಪೀಡಿತವಾಗಿದೆ. ವಾಸ್ತವವಾಗಿ 42 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಹಾನಿಯಾಗಿದ್ದು, 30 ಸಾವಿರ ಕೋಟಿಯಷ್ಟು ನಷ್ಟವಾಗಿದೆ, ಕೇಂದ್ರದ ಮಾರ್ಗಸೂಚಿಯಂತೆ 4,860 ಕೋಟಿ ರೂ. ಪರಿಹಾರ ಮೊತ್ತ ಕೋರಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ, ಖಾಸಗಿ ಕೊಳವೆಬಾವಿಗಳನ್ನು ಬಳಸಬೇಕು, ಅಗತ್ಯವಿದ್ದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಸಹ ತಿಳಿಸಲಾಗಿದೆ. ಒಟ್ಟಾರೆ ಜನರ ಕೈಗೆ ಕೆಲಸ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದರು.