ಪ್ರಬಲ ಸಮುದಾಯಗಳಿಗೆ 2ಎ ಮೀಸಲಾತಿ: ಹಿಂದುಳಿದ ಜಾತಿಗಳ ಒಕ್ಕೂಟ ತೀವ್ರ ವಿರೋಧ

Advertisement

ಬಾಗಲಕೋಟೆ: ಯಾವುದೇ ಅಧ್ಯಯನವಿಲ್ಲದೇ ಕೇವಲ ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವುದಕ್ಕೆ ಪ್ರಬಲವಾಗಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ನೀಡುವುದರಿಂದ ಸಣ್ಣ ಸಮುದಾಯಗಳಿಗೆ ಅನ್ಯಾಯವಾಗಲಿದ್ದು, ಇದನ್ನು ಖಂಡಿಸಿ ಡಿ. 26ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಆರ್ಥಿಕವಾಗಿ ಹಿಂದುಳಿದರೆ ಮೀಸಲಾತಿಗೆ ಅವಕಾಶವಿಲ್ಲ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನ ಹೇಳಿದೆ. ಆದರೆ ಅದನ್ನು ತಿರುಚುವ ಕೆಲಸಕ್ಕೆ ಆಳುವ ಸರ್ಕಾರಗಳು ಕೈಹಾಕುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.
ಪಂಚಮಸಾಲಿ ಸಮುದಾಯದಲ್ಲಿ ನಾಲ್ಕೈದು ಜನ ಶಾಸಕರು, ಇಬ್ಬರು ಮಂತ್ರಿಗಳು, ಸಂಸದರು ಇದ್ದಾರೆ. ಆ ಸಮುದಾಯದವರು ಸಕ್ಕರೆ ಕಾರ್ಖಾನೆ, ಉದ್ಯಮ ಸೇರಿ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋದವಿಲ್ಲ. ಆದರೆ 2ಎಗೆ ನೀಡುವುದರಿಂದ ಇತರೆ 104 ಜಾತಿಗಳಿಗೆ ಅನ್ಯಾಯವಾಗಲಿದೆ. ಅತಿ ಸಣ್ಣ ಸಮುದಾಯಗಳಿಗೆ ಇದರಿಂದ ಸಂಕಷ್ಟ ಎದುರಾಗಲಿದೆ ಎಂದು ಹೇಳಿದರು.
ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಡಲು ಡಿ. 26ರ ಸೋಮವಾರ ಬೆಳಗ್ಗೆ 10ಕ್ಕೆ ಬೆಳಗಾವಿಯ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನೇಕಾರ ಮುಖಂಡ ರವೀಂದ್ರ ಕಲಬುರಗಿ, ಸವಿತಾ ಸಮಾಜದ ಗೋಪಾಲಕೃಷ್ಣ ಹಳಪೇಟೆ, ವಿಠ್ಠಲ ಹಡಪದ, ರಾಮಣ್ಣ ಹಡಪದ, ಇಳಗೇರ ಸಮಾಜದ ಮಹಾಂತೇಶ ಇಳಗೇರ ವೇದಿಕೆಯಲ್ಲಿದ್ದರು. ಡಾ. ಎಂ.ಎಸ್. ದಡ್ಡೆನ್ನವರ, ಹಿರಿಯ ವಕೀಲ ಎಂ.ಎಲ್. ಶಾಂತಗಿರಿ, ಡಾ. ದೇವರಾಜ ಪಾಟೀಲ, ನಗರಸಭೆ ಸದಸ್ಯ ರವಿ ದಾಮಜಿ ಮತ್ತಿತರರು ಉಪಸ್ಥಿತರಿದ್ದರು.