ಪ್ರಯಾಣಿಕ ವಾಹನಗಳ ಮಾರಾಟ ವೃದ್ಧಿ

Advertisement

ಪ್ರಸಕ್ತ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ(ಎಪ್ರಿಲ್-ಜೂನ್) ದೇಶೀಯ ಆಟೋವಲಯವು ಕೊಂಚ ಚೇತರಿಕೆ ಕಂಡಿದೆ. ಪ್ರಯಾಣಿಕರ ವಾಹನಗಳ ಒಟ್ಟು ಮಾರಾಟ ಪ್ರಮಾಣ ೯,೧೦,೪೩೧ರಷ್ಟಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿದ್ದ ೬,೪೬,೨೭೨ ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಶೇ.೪೧ರಷ್ಟು ಹೆಚ್ಚಳವಾಗಿದೆ.
ಕಳೆದ ಐದು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಂಥ ಗಮನಾರ್ಹ ಪ್ರಗತಿ ದಾಖಲಿಸಲು ಸಾಧ್ಯವಾಗಿದೆ. ಕೋವಿಡ್ ಕಾಟದ ಎರಡು ವರ್ಷದ ಅವಧಿ ಆಟೋ ವಲಯದ ಪಾಲಿಗೆ ದುರಿತ ಕಾಲ. ಹಾಗೆ ನೋಡಿದರೆ ಈ ಮಹಾಮಾರಿ ಬರುವದಕ್ಕಿಂತ ಮುಂಚಿತವಾಗಿಯೇ ಈ ವಲಯದಲ್ಲಿನ ಪ್ರಗತಿ ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಇದು ಬಂದ ನಂತರವಂತೂ ಅಲ್ಲೋಲಕಲ್ಲೋಲವಾಯಿತು. ಪರಿಸ್ಥಿತಿ ತಿಳಿಯಾದ ನಂತರ ದೇಶದಲ್ಲಿ ಲಾಕ್‌ಡೌನ್ ತೆರವಾಗಿದ್ದರೂ ಮಲೇಶಿಯಾದಲ್ಲಿ ಮತ್ತೆ ಹೊಸದಾಗಿ ಲಾಕ್‌ಡೌನ್ ಆರಂಭವಾಯಿತು. ಇದರಿಂದಾಗಿ ಅಲ್ಲಿಂದ ಸೆಮಿಕಂಡಕ್ಟರ್ ಚಿಪ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತು. ಪ್ರಸ್ತುತ ಕಾರು, ಬೈಕ್‌ಗಳು ಡಿಜಿಟಲೀಕರಣಗೊಂಡ ಮೇಲೆ ಸೆಮಿಕಂಡಕ್ಟರ್ ಚಿಪ್‌ಗಳ ಬಳಕೆ ಹೆಚ್ಚುತ್ತಿದೆ. ಈಗಂತೂ ಕಾರುಗಳಲ್ಲೂ ಇಂಟರ್ನೆಟ್ ಸೌಲಭ್ಯ ಇರುವದರಿಂದ ಚಿಪ್ ಅನಿವಾರ್ಯವಾಗಿದೆ. ಹೀಗಾಗಿ ಇದರ ಕೊರತೆಯಿಂದಾಗಿ ಕಾರು, ಬೈಕ್ ಉತ್ಪಾದನೆ ಕಡಿಮೆಯಾಗಿ ಮತ್ತೆ ಮಂದಗತಿಯ ಪ್ರಗತಿ ದಾಖಲಿಸುವಂತಾಯಿತು. ಇಷ್ಟಾದ ಮೇಲೆ ಪ್ರಸಕ್ತ ಸಾಲಿನ ಆರಂಭದಲ್ಲೇ ಶುಭಶಕುನ ಉಂಟಾಗಿದ್ದು, ಇದು ಮುಂದಿನ ತ್ರೈಮಾಸಿಕ ಅವಧಿಗಳಲ್ಲೂ ಮುಂದುವರಿಯುವದೋ ಕಾದು ನೋಡಬೇಕಿದೆ.

ಮಾರಾಟದ ಸವಾಲು
ಈಗಿನ ಸಮಸ್ಯೆ ಏನೆಂದರೆ ಪ್ರಯಾಣಿಕ ವಾಹನಗಳ ಪೈಕಿ ಸಣ್ಣ ಕಾರು, ೧೨೫ ಸಿಸಿ ಸ್ಕೂಟರ್, ೧೧೦ ಸಿಸಿ ಬೈಕ್‌ಗಳ ಮಾರಾಟ ತೃಪ್ತಿಕರವಾಗಿಲ್ಲ. ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ೫೫,೦೦೦ ಸಣ್ಣ ಕಾರುಗಳು ಮಾರಾಟವಾಗಿದ್ದು, ೨೦೧೮-೧೯ನೇ ಸಾಲಿನ ಇದೇ ಅವಧಿಯಲ್ಲಿದ್ದ ೧.೩೫ ಲಕ್ಷಕ್ಕಿಂತ ಶೇ.೩೯ರಷ್ಟು ಇಳಿಕೆಯಾಗಿದೆ. ೧೨೫ ಸಿಸಿ ಸ್ಕೂಟರ್ ಸುಮಾರು ೧೧.೫೦ ಲಕ್ಷ, ೧೧೦ ಸಿಸಿ ಬೈಕ್ ೨೨.೧೨ ಲಕ್ಷದಷ್ಟಾಗಿದೆ. ೨೦೧೮-೧೯ರ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಅನುಕ್ರಮವಾಗಿ ೧೮.೦೯ ಲಕ್ಷ ಹಾಗೂ ೪೨.೭೭ ಲಕ್ಷದಷ್ಟಿತ್ತು ಎಂದು ಸಿಯಾಮ್(ಭಾರತೀಯ ಆಟೊನೊಬೈಲ್ ಉತ್ಪಾದಕರ ಸೊಸೈಟಿ) ತಿಳಿಸಿದೆ.
ಪ್ರಯಾಣಿಕ ಕಾರುಗಳ ಮಾರಾಟ ೪,೧೧,೪೪೧ರಷ್ಟಾಗಿದ್ದು, ಶೇ.೨೨ರಷ್ಟು ವೃದ್ಧಿಯಾಗಿದೆ. ಯುಟಿಲಿಟಿ ವಾಹನಗಳ ಮಾರಾಟ ೪,೬೪,೫೫೮ರಷ್ಟಾಗಿದ್ದು, ಶೇ.೬೨ರಷ್ಟು ಹೆಚ್ಚಳವಾಗಿದೆ. ದ್ವಿಚಕ್ರ ವಾಹನ ವಿಭಾಗದಲ್ಲಿ ೨೪,೦೫,೨೨೮ ಬೈಕ್‌ಗಳು ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಾಗಿದ್ದ ೧೭,೪೦,೩೦೮ಕ್ಕಿಂತ ಶೇ.೩೮ರಷ್ಟು ಜಾಸ್ತಿಯಾಗಿದೆ. ೧೨,೦೭,೯೦೩ ಸ್ಕೂಟರ್‌ಗಳು ಮಾರಾಟವಾಗಿದ್ದು, ಹಿಂದಿನ ಅವಧಿಯಲ್ಲಿದ್ದ ೬,೦೪,೨೯೧ಕ್ಕಿಂತ ಅಧಿಕವಾಗಿದೆ. ಹೀಗಾಗಿ ದ್ವಿಚಕ್ರವಾಹನಗಳ ಒಟ್ಟು ಮಾರಾಟ ಪ್ರಮಾಣ ೩೭,೨೪,೫೩೩ದಷ್ಟಾಗಿ, ಕಳೆದ ಅವಧಿಯಲ್ಲಿದ್ದ ೨೪,೧೩,೬೦೮ಕ್ಕಿಂತ ಶೇ.೫೪ರಷ್ಟು ವೃದ್ಧಿಯಾಗಿದೆ ಎಂದು ತಿಳಿಸಿದೆ.

ಸರ್ಕಾರದ ಕ್ರಮ
ಕೇಂದ್ರ ಸರಕಾರದ ಕ್ರಮ ಕೂಡ ವಾಹನಗಳ ಮಾರಾಟ ಹೆಚ್ಚಳಕ್ಕೆ ನೆರವಾಗಿದೆ. ಪೆಟ್ರೋಲ್, ಡೀಸೇಲ್ ಮೇಲಿನ ಅಬಕಾರಿ ಸುಂಕ ತಗ್ಗಿಸಿರುವುದು, ಉಕ್ಕು ಮತ್ತು ಪ್ಲಾಸ್ಟಿಕ್ ಮೇಲಿನ ಸುಂಕ ತಗ್ಗಿಸಿ ಬೆಲೆ ಇಳಿಸಲು ಮುಂದಾಗಿರುವದು ಗ್ರಾಹಕರಿಗೆ ಅನುಕೂಲವಾಗಿದೆ. ಇನ್ನು ಸಿಎನ್‌ಜಿ ಬೆಲೆ ಇಳಿಕೆಯಾದರೆ ಆಟೋ ವಲಯಕ್ಕೆ ಇನ್ನಷ್ಟು ಪುಷ್ಠಿ ನೀಡಿದಂತಾಗಲಿದೆ ಎಂದು ಸಿಯಾಮ್ ಅಭಿಪ್ರಾಯಪಟ್ಟಿದೆ.