ಪ್ರವಾಹ ಎದುರಿಸಲು ಸಂಪೂರ್ಣ ಸಜ್ಜು‌: ಸಿದ್ದು ಸವದಿ

Advertisement

ಬಾಗಲಕೋಟೆ: ಕೃಷ್ಣಾ ನದಿಯಿಂದ ರಬಕವಿ ಬನಹಟ್ಟಿ ತಾಲ್ಲೂಕಿಗೆ ಸದ್ಯಕ್ಕಂತೂ ಯಾವುದೆ ಪ್ರವಾಹ ಭೀತಿ ಇಲ್ಲ. ಪ್ರವಾಹವನ್ನು ಎದುರಿಸಲು ತಾಲ್ಲೂಕು ಆಡಳಿತ ಸಂಪೂರ್ಣ ಸಜ್ಜಾಗಿದೆ.
ಈ ಕುರಿತು ತಾಲ್ಲೂಕು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಗುರುವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿಗೆ 1,30,800 ಕ್ಯುಸೆಕ್ ಒಳ ಹರಿವು ಇದ್ದು ಅಷ್ಟೇ ಪ್ರಮಾಣದ ನೀರಿನ ಹೊರ ಹರಿವು ಕೂಡಾ ಇದೆ. ಮೂರು ಲಕ್ಷ ಕ್ಯುಸೆಕ್ ನೀರು ಬಂದರೆ ಮಾತ್ರ ಪ್ರವಾಹದ ಭೀತಿಯ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳು ಮಹಾರಾಷ್ಟ್ರದ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ: 119 ಮಿ.ಮೀ, ನವುಜಾ: 189 ಮಿ.ಮೀ, ಮಹಾಬಳೇಶ್ವರ: 154 ಮಿ.ಮೀ, ತರಾಳಿ: 26 ಮಿ.ಮೀ, ವಾರಣಾ: 55 ಮಿ.ಮೀ, ರಾಧಾ ನಗರಿ: 94 ಮಿ.ಮೀ, ದೂಧಗಂಗಾ: 85 ಮಿ.ಮೀ ಮಳೆಯಾದ ವರದಿಯಾಗಿದೆ.
ಮಹಾರಾಷ್ಟ್ರ ಕರ್ನಾಟಕದ ಸೀಮೆಯಲ್ಲಿರುವ ರಾಜಾಪುರ ಬ್ಯಾರೇಜ್‌ನಿಂದ 1,05,667 ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.