ಬಂಗಾರವನ್ನೂ ಮೀರಿಸಿದ `ಕೆಂಪು ಸುಂದರಿ’

Advertisement

ಬಾಗಲಕೋಟೆ: ಸದ್ಯ ಮಾರುಕಟ್ಟೆಯಲ್ಲಿ ದರ ವಿಚಾರದಲ್ಲಿ ಹೆಚ್ಚು ಸಂಚಲನ ಸೃಷ್ಟಿಸಿರುವ ತರಕಾರಿ ಈ ಕೆಂಪು ಸುಂದರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಸೃಷ್ಟಿಸಿದೆ.
ಅನೇಕ ದಿನಗಳಿಂದ ಟೊಮೆಟೊ ಬೆಳೆದು ನಷ್ಟ ಅನುಭವಿಸಿದ ರೈತರಿಗೆ ಈ ಭಾರಿ ಉತ್ತಮ ಆದಾಯ ದೊರಕುತ್ತಿದೆ. ಈ ಹಿಂದೆ ಎಂದೂ ಸಿಗದ ಬೆಲೆ ಈಗ ಮಾರುಕಟ್ಟೆಯಲ್ಲಿ ಟೊಮೆಟೊಗೆ ಸಿಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ರೈತ ಮಲ್ಲಪ್ಪ ಮಗದುಮ್, ಬೇರೋಬ್ಬರ ಭೂಮಿಯನ್ನು ಊಳುತ್ತಾ ಎರಡುವರೆ ಎಕರೆಯಲ್ಲಿ ಬೆಳೆದ ಟೊಮೆಟೊ ಈಗ ಬಂಗಾರದಷ್ಟು ಬೆಲೆ ಬಂದಿದೆ.
ಕಳೆದ ಎರಡು-ಮೂರು ತಿಂಗಳ ಹಿಂದೆ ಕೆಜಿಗೆ 2, 3 ರೂ. ಇದ್ದ ಟೊಮೆಟೊ ಈಗ 150 ರೂ. ಗಡಿ ದಾಟಿದೆ. ಹೀಗಾಗಿ ಸದ್ಯ ಈ ಬೆಳೆ ಬೆಳೆದ ರೈತರಿಗೆ ಒಳ್ಳೆಯ ಲಾಭ ದೊರೆಯುತ್ತಿದೆ. ಈ ರೈತ ಎರಡೂವರೆ ಎಕರೆಯಷ್ಟು ಜಾಗದಲ್ಲಿ ಸಾವೋ ತಳಿಯ 15 ಸಾವಿರ ಟೊಮೆಟೊ ಸಸಿಗಳನ್ನು ಸ್ಥಳೀಯ ನರ್ಸರಿಯಿಂದ ತೆಗೆದುಕೊಂಡು ಬಂದು ನಾಟಿ ಮಾಡಿದ್ದಾರೆ.
ಇಲ್ಲಿವರೆಗೆ 14-15 ಭಾರಿ ಕೊಯ್ಲು ಮಾಡಿದ್ದು ಸರಿ ಸುಮಾರು 15 ಲಕ್ಷ ಆದಾಯ ದೊರೆತಿದೆ ಎನ್ನುತ್ತಾರೆ ಯುವ ರೈತ ಕುಮಾರ ಮಗದುಮ್.
ಕಳೆದರಡು ತಿಂಗಳ ಹಿಂದೆ ಇದರ ಬೆಲೆ 2 ರೂ.ಗೆ ಕೇಳುವವರೂ ಇಲ್ಲದಾಗ ಇಡೀ ಎರಡೂವರೆ ಎಕರೆಯಷ್ಟು ಟೊಮೆಟೊ ಬೆಳೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದೇವು. ನಮ್ಮ ಭೂಮಿಯಲ್ಲಿನ ಬೆಳೆ ಕಟಾವಿಗೆ ಬರುವ ಸಂದರ್ಭ 40 ರೂ. ಗೆ ಕೆಜಿಯಿತ್ತು. ಆಗ ಇದಕ್ಕೆ ಮತ್ತೇ ಗಮನದಲ್ಲಿಟ್ಟು ಬೆಳೆದು ಉತ್ತಮ ಗೊಬ್ಬರ, ನೀರಿನೊಂದಿಗೆ ಜೋಪಾನ ಮಾಡಿಕೊಂಡಿದ್ದರ ಪರಿಣಾಮ ಇಷ್ಟೊಂದು ಆದಾಯ ಬರುವಲ್ಲಿ ಕಾರಣವಾಗಿದ್ದು, ಇನ್ನೂ 10 ರಿಂದ 12 ಕಟಾವು ಬರುವ ನಿರೀಕ್ಷೆಯಿದ್ದು, ಇನ್ನೂ 15 ಲಕ್ಷ ರೂ.ಗಳ ಆದಾಯದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಮಗದುಮ್.