ಬಂಧನದ ಬಂಧ ಹರಿದ ಸಂಬಂಧಗಳು

Advertisement

ನಿಂತಿರುವ ಒಂದು ಗಾಡಿ ಮುನ್ನಡೆಯಬೇಕಾದರೆ ಮೊದಲನೆಯ ಗೇರ ಹಾಕಬೇಕಾಗುತ್ತದೆ. ನಾಲ್ಕು ಹೆಜ್ಜೆ ಮುನ್ನಡೆದ ನಂತರ ಎರಡನೆಯ ಗೇರ, ನಂತರ ಮೂರನೆಯ ಗೇರ ಹಾಕಿದಾಗ ಗಾಡಿಗೆ ಒಂದು ಗತಿ ದೊರೆಯುತ್ತದೆ. ಆದರೆ ಗಾಡಿಯ ನಿಜವಾದ ವೇಗ ತಿಳಿಯುವುದು ಟಾಪ್ ಗೇರನಲ್ಲಿ ಮಾತ್ರ. ಇದರಂತೆಯೇ ನಮ್ಮ ಸಂಬಂಧಗಳು ಕೂಡ ಬದುಕುನ ಸಾಗಿದಂತೆ ಭಾವದ ಎತ್ತರಕ್ಕೆ ಏರಬೇಕು ಆತ್ಮದ ಆಳಕ್ಕೆ ಇಳಿಯಬೇಕು. ಸಂಬಂಧವು ಲೌಕಿಕವಾಗಿ ಪ್ರಾರಂಭಗೊಳ್ಳುತ್ತದೆ. ಇದು ಮೊದಲನೆಯ ಗೇರ ಇದ್ದಂತೆ ನಂತರ ಅದು ಭಾವನಾತ್ಮಕವಾಗಿ ಬೆಳೆಯಬೇಕು ಇದು ೨ ಅಥವಾ ೩ನೇ ಗೇರ ಇದ್ದಂತೆ. ಕೊನೆಗೆ ಅದು ಆತ್ಮಿಕವಾಗಿ ವಿಕಾಸಗೊಳ್ಳಬೇಕು. ಇದು ಟಾಪ್ ಗೇರ್ ಇದ್ದಂತೆ. ಇಲ್ಲಿ ಸಂಬಂಧಗಳಿಗೆ ನಿಜವಾದ ಅರ್ಥ ದೊರೆಯುತ್ತದೆ. ಎಲ್ಲರೂ ತನ್ನಂತೆ ಕಾಣುವರು. ದೃಷ್ಟಿಯಲ್ಲ ದೇವಮಯವಾಗಿ ಪರಿಣಮಿಸುತ್ತದೆ.
ರಾಮಕೃಷ್ಣ ಪರಮಹಂಸರು ಶಾರದಾಮಾತೆಯನ್ನು ಮದುವೆಯಾದರು. ಮದುವೆಯ ಮಂಟಪದಲ್ಲಿ ಮದುವೆಯ ಪ್ರಸಂಗದಲ್ಲಿ ಜರುಗಬೇಕಾದ ಎಲ್ಲ ವಿಧಿವಿಧಾನಗಳು ಜರುಗಿದವು. ತಾಳಿ ಕಟ್ಟುವುದು, ಅಕ್ಷತಾರೋಪಣೆ ಇತ್ಯಾದಿ ಎಲ್ಲವೂ ವ್ಯವಸ್ಥಿತವಾಗಿ ಜರುಗಿದವು. ಇಬ್ಬರೂ ಗಂಡ-ಹೆಂಡತಿಯರಾದರು. ಆದರೆ ಈ ಸಂಬಂಧ ಇಷ್ಟಕ್ಕೆ ನಿಲ್ಲಲಿಲ್ಲ. ವಿಕಾಸವಾಯಿತು. ಭಾವದೆತ್ತರಕ್ಕೆ ಬೆಳೆಯಿತು. ಆತ್ಮದ ಆಳಕ್ಕೆ ಇಳಿಯಿತು. ಶಾರದೆ ಎದುರು ಬಂದು ನಿಂತಾಗ ಅವಳಲ್ಲಿ ಹೆಂಡತಿ ಕಾಣಲಿಲ್ಲ. ಜಗನ್ಮಾತೆ ಜಗದಂಬೆಯ ದರ್ಶನವಾಯಿತು. ಮನದ ಕಾಮವಾಸನೆ ಪುಟಿದೇಳಲಿಲ್ಲ. ಭಕ್ತಿಯ ಮೃದು ಮಧುರ ಭಾವ ಒಡಮೂಡಿತು. ಇದು ಸಂಬಂಧದ ಪರಮ ವಿಕಾಸ. ನೀಲಾಂಬಿಕೆ ಮತ್ತು ಬಸವಣ್ಣ ಸತಿಪತಿಗಳಾಗಿದ್ದರೂ ಇದೇ ಸಂಬಂಧ ಕೊನೆಯವರೆಗೂ ಉಳಿದಿರಲಿಲ್ಲ. ಆಧ್ಯಾತ್ಮಿಕ ವಿಕಾಸವಾದಂತೆ ಅವರ ಸಂಬಂಧದ ವಿಕಾಸವು ಜೊತೆ ಜೊತೆಯಲ್ಲಿ ಉಂಟಾಗಿತ್ತು. ನೀಲಮ್ಮನವರು ಹೇಳುವ ಕೆಳಗಿನ ಈ ಮಾತು ಇದಕ್ಕೆ ನಿದರ್ಶನವಾಗುತ್ತದೆ.
“ಮಡದಿ ಎನಲಾಗದು ಬಸವಂಗೆ ಎನ್ನನು
ಪುರುಷನೆನಲಾಗದು ಬಸವನು ಎನಗೆ.
ಉಭಯದ ಕುಳವ ಹರಿದು ಬಸವಂಗೆ ಶಿಶುವಾದೆ
ಬಸವನೆನ್ನ ಶಿಶುವಾದನು.”
ಹೀಗೆ ಅನೇಕ ಮಹಾತ್ಮರು ತಮ್ಮ ಲೌಕಿಕ ಸಂಬಂಧಗಳನ್ನು ಆಧ್ಯಾತ್ಮಿಕ ಎತ್ತರಕ್ಕೆ ತಂದಿರುವುದನ್ನು ಕಾಣಬಹುದು. ಇಂತಹ ಎತ್ತರಕ್ಕೆ ಏರುವ ಈ ಸಂಬಂಧಗಳು ಮೊದಲು ಲೌಕಿಕವಾಗಿಯೇ ಪ್ರಾರಂಭಗೊಳ್ಳುತ್ತವೆ. ನಂತರ ಆತ್ಮದೆತ್ತರಕ್ಕೆ ಏರಿ ಇತರರಿಗೆ ಆದರ್ಶವವೂ ಅನುಕರಣೀಯವೂ ಆಗುತ್ತವೆ.