ಬಡಪಾಯಿ ಶೆಟ್ಟರ್ ಸೋಲಿಸುವ ಅಭಿಯಾನ ಯಾಕೆ?

Advertisement

ಹುಬ್ಬಳ್ಳಿ: ನಾನೊಬ್ಬ ಬಡಪಾಯಿ ಶೆಟ್ಟರ್ ಆದರೆ ನನ್ನ ಮೇಲೆ ಬಿಜೆಪಿ ಸೋಲಿಸುವ ಅಭಿಯಾನ ಮಾಡುತ್ತಿದೆ. ಅಂತಿಮವಾಗಿ ಮೇ 10ರಂದು ಜನತಾ ಕೋರ್ಟ್’ನಲ್ಲಿ ಸೋಲು-ಗೆಲುವು ನಿರ್ಧಾರ ಆಗಲಿದೆ ಎಂದು ಮಾಜಿ ಸಿಎಂ ಹಾಗೂ ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ಕೇವಲ ಹುಬ್ಬಳ್ಳಿಗೆ ಮಾತ್ರ ಸೀಮಿತವಲ್ಲ, ರಾಜ್ಯದ ಸೆಂಟ್ರಲ್ ಕ್ಷೇತ್ರವಾಗಿದೆ. ಅಷ್ಟೇ ಅಲ್ಲದೇ ರಾಷ್ಟ್ರದಾದ್ಯಂತ ಕ್ಷೇತ್ರದ ವಿಷಯ ಚರ್ಚೆ ಆಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಬೇಕೆಂಬ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಬಿ.ಎಸ್. ಯಡಿಯೂರಪ್ಪ ಅವರೂ ಕೂಡಾ ಮಂಗಳವಾರ ಪ್ರಮುಖರ ಸಭೆ ನಡೆಸಿ ನನ್ನ ಸೋಲಿಸಲು ಆಂದೋಲನ ನಡೆಸಿದ್ದಾರೆ. ಯಾಕಿಷ್ಟು ಬಡಪಾಯಿ ಶೆಟ್ಟರ್’ಗೆ ಸೋಲಿಸುವ ಗುರಿಯನ್ನು ಬಿಜೆಪಿ ಮಾಡಿಕೊಂಡಿದೆ ಗೊತ್ತಾಗುತ್ತಿಲ್ಲ ಎಂದರು.
ನಾನಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿಲ್ಲ, ನನ್ನಂತೆಯೇ ಆಯನೂರು ಮಂಜುನಾಥ, ಲಕ್ಷ್ಮಣ ಸವದಿ, ಯಲ್ಲಾಪುರದಲ್ಲಿ ಮಾಜಿ ಶಾಸಕ, ಎನ್.ಆರ್.ಸಂತೋಷ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಆಗಿದ್ದಾರೆ. ಆದರೆ ನಾನು ಯಾವುದೋ ಅಪರಾಧ ಮಾಡಿದಂತೆ ಎಲ್ಲರೂ ನನಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದರು.
ಟಿಕೆಟ್‌ ವಿಷಯದಲ್ಲಿ ಜೋಶಿ ರಾಜಕೀಯ:
ಪ್ರಲ್ಹಾದ್ ಜೋಶಿ ಅವರು ತತ್ವಸಿದ್ದಾಂತಗಳಿಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆಂಬ ಹೇಳಿಕೆ ಕೊಟ್ಟಿದ್ದಾರೆ. ಟಿಕೆಟ್ ವಿಚಾರದಲ್ಲಿ ಪ್ರಲ್ಹಾದ್ ಜೋಶಿ ಬಹಳ ರಾಜಕಾರಣ ಮಾಡಿದ್ದಾರೆ. ಅದು ಬಹಳ ದಿನ ನಡೆಯೋದಿಲ್ಲ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಿದ್ದಾರೆ. ಅಪರಾಧಿ ಹಿನ್ನೆಲೆಯುಳ್ಳವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಹಿರಿತನಕ್ಕೆ ಬೆಲೆ ಕೊಡದೇ ಟಿಕೆಟ್ ಕೈತಪ್ಪಿಸಿದ್ದು ಸ್ವಾಭಿಮಾನಕ್ಕೆ ದಕ್ಕೆ ತರಲಾಯಿತು. ಈ ದಿಸೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು, ಈ ಬಾರಿ ಅತ್ಯಧಿಕ ಮತಗಳನ್ನು ಪಡೆದು ಗೆದ್ದು ಬರಲಿದ್ದೇನೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.