ಬರ-ದೆಹಲಿಯನ್ನು ದೂರುವುದು ಪರಿಹಾರವಲ್ಲ

Advertisement

೧೯೫ ತಾಲೂಕುಗಳಲ್ಲಿ ಬರ ಇದೆ ಎಂದು ಘೋಷಿಸಿ ದೆಹಲಿಯನ್ನು ದೂಷಿಸಿದರೆ ಕೆಲಸವಾಗುವುದಿಲ್ಲ. ಕೂಡಲೇ ರಾಜ್ಯ ಸರ್ಕಾರ ಪರಿಹಾರ ಕಾಮಗಾರಿ ಆರಂಭಿಸಬೇಕು.

ರಾಜ್ಯದಲ್ಲಿ ೨೩೬ ತಾಲೂಕುಗಳಲ್ಲಿ ೧೯೫ ತಾಲೂಕು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಕೇಂದ್ರದ ಮಾರ್ಗಸೂಚಿಯಂತೆ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ರವಾನಿಸುವ ಕೆಲಸ ನಡೆಯುತ್ತಿದೆ ಎಂದು ಕೈಕಟ್ಟಿ ಕುಳಿತರೆ ಉಪಯೋಗವೇನೂ ಆಗುವುದಿಲ್ಲ. ಕೇಂದ್ರ-ರಾಜ್ಯದ ತಿಕ್ಕಾಟದ ನಡುವೆ ಬಡಜನ ಸುಮ್ಮನೆ ಕೂಡಲು ಬರುವುದಿಲ್ಲ. ಅವರು ಕುಡಿಯುವ ನೀರು ಮತ್ತು ಅನ್ನಕ್ಕಾಗಿ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದು ಅನಿವಾರ್ಯ. ದನಕರುಗಳಿಗೆ ಮೇವು ಸಿಕ್ಕಲಿಲ್ಲ ಎಂದರೆ ಅವುಗಳು ಕಸಾಯಿಖಾನೆ ಪಾಲಾಗುವುದು ನಿಶ್ಚಿತ. ದುಡಿಯುವ ಜನ ಮಕ್ಕಳು ಮತ್ತು ಮುದುಕರನ್ನು ಮನೆಯಲ್ಲೇ ಬಿಟ್ಟು ಮಹಾರಾಷ್ಟ್ರ, ಗೋವಾ ಮತ್ತಿತರ ರಾಜ್ಯಗಳಿಗೆ ಹೋಗುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಮುಂಬೈನಲ್ಲಿ ಗುಲ್ಬರ್ಗ ಗಲ್ಲಿ ಎಂಬ ಕಾಲೋನಿಯೇ ಇದೆ. ರಾತ್ರಿ ಹೈದರಾಬಾದ್‌ನಿಂದ ಬರುವ ಪ್ಯಾಸೆಂಜರ್ ರೈಲು ಕಲಬುರ್ಗಿ, ರಾಯಚೂರು ಬಡವರನ್ನು ಹೊತ್ತು ಬೆಳಗ್ಗೆ ಮುಂಬೈ ತಲುಪುತ್ತದೆ. ಇದು ಅಲ್ಲಿಯ ಬರದ ಕತೆ. ಈಗ ಹಲವು ವರ್ಷಗಳಿಂದ ಈ ಪರಿಪಾಠ ನಿಂತಿತ್ತು. ಈಗ ಮತ್ತೆ ಆರಂಭವಾಗುವ ಎಲ್ಲ ಸೂಚನೆಗಳೂ ಕಂಡು ಬರುತ್ತಿವೆ.
ಬರಗಾಲ ಯಾರನ್ನೂ ಕೇಳಿ ಬರುವುದಿಲ್ಲ. ರಾಜ್ಯ ಸರ್ಕಾರ ೫ ಗ್ಯಾರಂಟಿಗಳನ್ನು ಆರಂಭಿಸಲು ತೋರಿಸಿದ ಉತ್ಸಾಹವನ್ನು ಬರ ನಿರ್ವಹಣೆಯಲ್ಲಿ ಪ್ರದರ್ಶಿಸಬೇಕು. ಪ್ರತಿಯೊಬ್ಬ ಕಡು ಬಡವರಿಗೆ ತಿಂಗಳಿಗೆ ೧೦ ಕೆಜಿ ಅಕ್ಕಿ ಉಚಿತ ಎಂದು ಕೇಂದ್ರದ ನೆರವು ಸಿಗದಾಗಲೂ ೫ ಕೆಜಿ ಅಕ್ಕಿ ಹಾಗೂ ಉಳಿದ ೫ ಕೆಜಿಗೆ ಹಣ ವಿತರಣೆ ಮಾಡಿತು. ಈಗಲೂ ಕೇಂದ್ರದ ಬರಪರಿಹಾರಕ್ಕೆ ಕಾಯದೆ ಕ್ರಮ ಕೈಗೊಳ್ಳುವುದು ಅಗತ್ಯ. ಗ್ಯಾರಂಟಿ ಯೋಜನೆಯಂತೆ ಬರ ಪರಿಹಾರ ಕಾಮಗಾರಿ ಆರಂಭಿಸಲು ರಾಹುಲ್ ಗಾಂಧಿಯವರನ್ನು ಆಹ್ವಾನಿಸುವ ಮೂಲಕ ಚಾಲನೆ ಕೊಡಿಸಬೇಕು. ಹಣ ಇಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳಲು ಬರುವುದಿಲ್ಲ.
ಕರ್ನಾಟಕದ ಜನರಿಗೆ ಬರಗಾಲ ಹೊಸತೇನಲ್ಲ. ಅದರಲ್ಲೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅದನ್ನು ಸ್ವತಃ ಕಂಡವರು. ಅವರ ಮಾರ್ಗದರ್ಶನವನ್ನು ರಾಜ್ಯ ಸರ್ಕಾರ ಪಡೆಯುವುದು ಸೂಕ್ತ. ಮೊದಲು ಎಲ್ಲ ಕಡೆ ಕುಡಿಯುವ ನೀರು ಪೂರೈಕೆ ಮಾಡುವುದು ಅಗತ್ಯ. ಖಾಸಗಿ ಕೊಳವೆಬಾವಿಗಳನ್ನು ಸರ್ಕಾರ ವಶಕ್ಕೆ ಪಡೆದು ಟ್ಯಾಂಕರ್‌ಗಳಲ್ಲಿ ನೀರು ಒದಗಿಸಬೇಕು. ಬರಗಾಲದಲ್ಲಿ ಸೋಂಕು ರೋಗ ಬರುವುದೇ ನೀರಿನ ಕೊರತೆಯಿಂದ. ಅದರಿಂದ ಮುನ್ನೆಚ್ಚರಿಕೆ ಅಗತ್ಯ. ಜನರಿಗೆ ಉಚಿತವಾಗಿ ಆಹಾರ ಧಾನ್ಯ ನೀಡಬೇಕು. ಬರಗಾಲದಲ್ಲಿ ಬಡವ-ಶ್ರೀಮಂತ ಎಂಬ ವಿಭಜನೆ ಇರುವುದಿಲ್ಲ. ನಮ್ಮ ರಾಜ್ಯದಲ್ಲಿ ಶೇಕಡ ೮೦ ರಷ್ಟು ಜನ ಕೃಷಿ ಕೂಲಿ ಕಾರ್ಮಿಕರು. ಅವರಿಗೆ ಕೆಲಸ ಒದಗಿಸಲು ನರೇಗಾ ಯೋಜನೆಯೊಂದೇ ಇರುವುದು. ವರ್ಷಕ್ಕೆ ೧೦೦ ದಿನ ಕೆಲಸ ಕೊಡಬಹುದು ಎಂದು ನಿಯಮ ಹೇಳುತ್ತದೆ. ಅದನ್ನು ೨೦೦ ದಿನಗಳಿಗೆ ಎಂದು ವಿಸ್ತರಿಸಬೇಕು. ಸರ್ಕಾರವೇ ಗೋಶಾಲೆಗಳನ್ನು ತೆರೆದು ದನಕರುಗಳನ್ನು ರಕ್ಷಿಸಬೇಕು.
ಪರಿಹಾರ ಕಾಮಗಾರಿಗಳಿಗೆ ಕೇಂದ್ರದ ನೆರವು ಬರುವವರೆಗೆ ಸುಮ್ಮನೆ ಕೂಡುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿ ಐಟಿ-ಬಿಟಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವುಗಳು ಪ್ರತಿವರ್ಷ ಸಾಮಾಜಿಕ ಕೆಲಸಗಳಿಗೆ ಹಣ ತೊಡಗಿಸಿ ತೆರಿಗೆ ವಿನಾಯಿತಿ ಪಡೆಯುತ್ತವೆ. ಆ ಹಣವನ್ನು ಬರಪೀಡಿತ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿ ರಿಸರ್ವ್ ಬ್ಯಾಂಕ್ ಮೂಲಕ ಈ ನಿಧಿಗೆ ವಿಶೇಷ ತೆರಿಗೆ ವಿನಾಯಿತಿ ಪಡೆಯಬೇಕು. ಆಗ ಹಣದ ಕೊರತೆ ಬರುವುದಿಲ್ಲ. ಅಲ್ಲದೆ ಪರಿಹಾರ ಕಾಮಗಾರಿಗಳನ್ನು ಖಾಸಗಿ ಸಂಸ್ಥೆಗಳು ನೇರವಾಗಿ ಕೈಗೊಳ್ಳಲು ಮುಕ್ತ ಅವಕಾಶ ನೀಡಬಹುದು. ಸರ್ಕಾರಕ್ಕೆ ಹಣ ನೀಡಲು ಕೆಲವು ಸಂಸ್ಥೆಗಳು ಒಪ್ಪುವುದಿಲ್ಲ. ಹಣ ಬೇಡ ನೇರವಾಗಿ ಕಾಮಗಾರಿ ಕೈಗೊಳ್ಳಿ ಎಂದು ಹೇಳಿದರೆ ಉತ್ತಮ ಕಾಮಗಾರಿಗಳು ನಡೆಯುತ್ತವೆ. ಹಿಂದೆ ಈ ಪ್ರಯತ್ನಗಳು ನಡೆದಿವೆ. ಬರಗಾಲ ಇರುವ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಹಲವು ಶಿಬಿರಗಳನ್ನು ಆರಂಭಿಸಿ ಮಕ್ಕಳು ಮತ್ತು ವಯೋವೃದ್ಧರಿಗೆ ಹೆಚ್ಚಿನ ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳಬೇಕು.