ಬಳ್ಳಾರಿ ಜಿಲ್ಲಾ ಉತ್ಸವ: ಜನ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ

ಬಳ್ಳಾರಿ ಉತ್ಸವ
Advertisement

ಬಳ್ಳಾರಿ: ಜಿಲ್ಲಾಡಳಿತ ಮೊದಲ ಬಾರಿಗೆ ಹಮ್ಮಿಕೊಂಡ ೨ ದಿನಗಳ ಜಿಲ್ಲಾ ಉತ್ಸವ ಜನ ಮನಸೂರೆಗೊಳ್ಳುವಲ್ಲಿ ಯಶಸ್ಸು ಕಂಡಿದೆ.
ಉತ್ಸವ ನಿಮಿತ್ತ ಹಮ್ಮಿಕೊಂಡ ಎತ್ತಿನ ಬಂಡಿ ಮೆರವಣಿಗೆ, ರಂಗೋಲಿ ಸ್ಪರ್ಧೆ, ಅಡುಗೆ ಸ್ಪರ್ಧೆ, ಕುಸ್ತಿ, ಕಬಡ್ಡಿ, ಗುಂಡು ಎತ್ತುವ ಸ್ಪರ್ಧೆ, ಶ್ವಾನ ಪ್ರದರ್ಶನ ಹೀಗೆ ಎಲ್ಲಾ ಸ್ಪರ್ಧೆಗಳಲ್ಲಿ ಬಳ್ಳಾರಿಯ ಜನರು ಮುಗಿಬಿದ್ದು ಪಾಲ್ಗೊಂಡರು.
ಉತ್ಸವದ ನಿಮಿತ್ತ ಹಮ್ಮಿಕೊಂಡ ರಂಗೋಲಿ ಸ್ಪರ್ಧೆ ಇಡೀ ಉತ್ಸವದ ಪ್ರಮುಖ ಆಕರ್ಷಣೆಯಾಯಿತು. ೧೮೦ ಮಹಿಳೆ, ಯುವತಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಸ್ಪರ್ಧಿಗಳು ಹೆಚ್ಚು ಎಂಬ ಕಾರಣಕ್ಕಾಗಿಯೇ ಸ್ಪರ್ಧೆಯನ್ನು ೨ ದಿನ ಮಾಡಬೇಕಾಯಿತು. ಎರಡೂ ದಿನದ ಸ್ಪರ್ಧೆಯಲ್ಲಿ ತರೇಹವಾರಿ ರಂಗೋಲಿಗಳು ಕಂಡುಬಂದವು.
ವೇದಿಕೆ ಕಾರ್ಯಕ್ರಮದ ವಿಷಯಕ್ಕೆ ಬಂದರೆ ಅತಿ ದೊಡ್ಡ ಯಶಸ್ಸು ಬಳ್ಳಾರಿ ರಾಘವ ವೇದಿಕೆಯಲ್ಲಿ ಕಂಡುಬಂತು. ಕೋಟೆಮಲ್ಲೇಶ್ವರ ದೇವಸ್ಥಾನದ ಪಕ್ಕ ಹಾಕಲಾದ ಎರಡನೆಯ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿದ ಕಾರಣ ಪ್ರೇಕ್ಷಕರ ಸಂಖ್ಯೆಯಲ್ಲಿ ಕೊರತೆ ಕಂಡುಬಂದರೂ ಯಶಸ್ವಿಯಾಗಿ ಕಾರ್ಯಕ್ರಮಗಳು ಮೂಡಿಬಂದವು.