ಬಸವವನದಲ್ಲಿದ್ದ ಬಸವೇಶ್ವರ ಪುತ್ಥಳಿ ರಾತ್ರೋರಾತ್ರಿ ತೆರವು

Advertisement


ಹುಬ್ಬಳ್ಳಿ : ಫ್ಲೈಓವರ್ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಬಸವ ವನದಲ್ಲಿದ್ದ ಬಸವೇಶ್ವರ ಪುತ್ಥಳಿಯನ್ನು ಸೋಮವಾರ ರಾತ್ರಿ ತೆರವುಗೊಳಿಸಲಾಯಿತು.
ಒಂದು ಕ್ರೇನ್ ಮತ್ತು ಒಂದು ಎರಡು ಜೆಸಿಬಿಗಳಿಂದ ರಾತ್ರಿ ಹತ್ತು ಗಂಟೆಗೆ ಶುರುವಾದ ತೆರವು ಕಾರ್ಯಾಚರಣೆ ತಡರಾತ್ರಿಯವರೆಗೂ ನಡೆಯಿತು.

ಫ್ಲೈಓವರ್ ಬಸವವನದ ಮೇಲ್ಭಾಗದಲ್ಲಿಯೇ ನಿರ್ಮಾಣವಾಗುವುದರಿಂದ ಪುತ್ಥಳಿಗೆ ಧಕ್ಕೆ ಆಗುವ ಸಾಧ್ಯತೆ ಇರುವುದರಿಂದ ಪುತ್ಥಳಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

ಹಲವು ದಶಕಗಳಿಂದ ನಗರದ ಹೃದಯ ಭಾಗದ ಬಸವವನದಲ್ಲಿದ್ದ ಬಸವೇಶ್ವರ ಪುತ್ಥಳಿ ಜನಮಾನಸದಲ್ಲಿತ್ತು. ಪ್ರಮುಖ ಕೇಂದ್ರವಾಗಿತ್ತು. ಫ್ಲೈಓವರ್ ನಿರ್ಮಾಣ ಹಿನ್ನೆಲೆಯಲ್ಲಿ ತೆರವುಗೊಳಿಸಿದ್ದಕ್ಕೆ ಅನೇಕರು ಆಕ್ಷೇಪ, ಆಕ್ರೋಶ ವ್ತಕ್ತಪಡಿಸಿದ್ದಾರೆ.

ಬಸವೇಶ್ವರ ಪುತ್ಥಳಿ ತೆರವು ಕಾರ್ಯಾಚರಣೆ ಮಾಡಬಾರದಿತ್ತು. ಲಿಂಗಾಯತ ಸಮಾಜದವರ ಅಭಿಪ್ರಾಯ ಪಡೆಯದೇ ತೆರವು ಮಾಡಲಾಗಿದೆ. ಕೆಲವು ಜನರನ್ನು ತಮಗೆ ಬೇಕಾದವರನ್ನು ಈ ಕುರಿತ ಸಭೆ ಕರೆದಿದ್ದರು. ಒಪ್ಪಿಗೆ ಪಡೆದಿದ್ದೇವೆ ಎಂದು ಅಧಿಕಾರಿಗಳು, ಗುತ್ತಿಗೆದಾರರು ಹೇಳುತ್ತಿದ್ದಾರೆ. ಆದರೆ ಸಮಾಜದವರ ಒಪ್ಪಿಗೆ ಇಲ್ಲ ಎಂದು ಕರವೇ ರಾಜ್ಯ ಸಂಘಟನಾ ಮುಖಂಡ ಹಾಗೂ ಲಿಂಗಾಯತ ಸಮಾಜದ ಸಚಿನ್ ಗಾಣಿಗೇರ ತೆರವು ಕಾರ್ಯಾಚರಣೆ ಸ್ಥಳದಲ್ಲಿ ಆಕ್ಷೇಪ ವ್ಯಕ್ರಪಡಿಸಿದರು.

ಬಸವೇಶ್ವರ ಪುತ್ಥಳಿ ಮೇಲೆಯೇ ಫ್ಲ್ಐಓವರ ಮಾಡಬೇಕಾಗಿತ್ತೇ? ಪಕ್ಕದಲ್ಲಿ ಮಾಡಲು ಸಾಧ್ಯ ಇರಲಿಲ್ಲವೇ. ಉದ್ದೇಶಪೂರ್ವಕವಾಗಿ ತೆರವು ಮಾಡಲಾಗುತ್ತಿದೆ. ಇದೊಂದು ಕಪ್ಪು ಚುಕ್ಕೆ ಎಂದು ದೂರಿದರು.


ತಾತ್ಕಾಲಿಕ ಸ್ಥಳಾಂತರ ಮಾತ್ರ

ಬಸವೇಶ್ವರ ಪುತ್ಥಳಿಯನ್ನು ತಾತ್ಕಾಲಿಕವಾಗಿ ಮಾತ್ರ ಇಂದಿರಾ ಗ್ಲಾಸ್ ಆವರಣಕ್ಕೆ ಸ್ಥಳಾಂತರಿಸುತ್ತಿದ್ದೇವೆ. ಈ ಕುರಿತು ಸಾರ್ವಜನಿಕ ಸಭೆಯನ್ನು ಮೇಲಧಿಕಾರಿಗಳು, ಜನಪ್ರತಿನಿಧಿಗಳು ನಡೆಸಿ ಒಪ್ಪಿಗೆ ಪಡೆಯಲಾಗಿದೆ. ಫ್ಲೈಓವರ್ ಕಾಮಗಾರಿ ಮುಗಿದ ಬಳಿಕ ಮತ್ತೆ ಬಸವೇಶ್ವರ ಪುತ್ಥಳಿ ಬಸವವನದ ಮೂಲ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುವುದು. ಲ್ಯಾಂಡ್ ಸ್ಕೇಪ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇದು ತಾತ್ಕಾಲಿಕ ಸ್ಥಳಾಂತರ ಅಷ್ಟೇ ಎಂದು ತೆರವು ಕಾರ್ಯಾಚರಣೆ ಉಸ್ತುವಾರಿಯಲ್ಲಿದ್ದ ಲೋಕೋಪಯೋಗಿ ಎಂಜಿನಿಯರ್ ಗಂಗಾಧರ್ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.