ಬಾಗಲಕೋಟೆಯಲ್ಲೂ ಭ್ರೂಣಹತ್ಯೆ ಜಾಲ

Advertisement

ಬಾಗಲಕೋಟೆ: ಹೆಣ್ಣುಭ್ರೂಣ ಪತ್ತೆ ಹಿನ್ನೆಲೆಯಲ್ಲಿ ಜಿಲ್ಲೆಯ ಮಹಾಲಿಂಗಪುರದಲ್ಲಿ ಗರ್ಭಪಾತಕ್ಕೊಳಗಾಗಿದ್ದ ಮಹಿಳೆಯೋರ್ವಳು ಅಸುನೀಗಿದ್ದು ರಾಜ್ಯದಲ್ಲಿ ಗರ್ಭಪಾತ ದಂಧೆ ಇನ್ನೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ.
ಕೊಲ್ಲಾಪುರದ ಸೋನಾಲಿ ಸಚಿನ್ ಕದಂ(೩೩) ಮೃತಳು. ಮೀರಜ್ ಅಥವಾ ಕುಪ್ವಾರ್‌ನಲ್ಲಿ ಸ್ಕ್ಯಾನಿಂಗ್ ಮಾಡಿಸಿರುವ ಶಂಕೆ ವ್ಯಕ್ತವಾಗಿದ್ದು, ನಂತರ ಮಹಾಲಿಂಗಪುರದ ಕವಿತಾ ಸುರೇಶ ಬಾದನ್ನವರ ಎಂಬ ಆಯಾ ಬಳಿ ಸೋನಾಲಿಯನ್ನು ಗರ್ಭಪಾತ ಮಾಡಿಸಲು ಕರೆತರಲಾಗಿತ್ತಂತೆ. ಗರ್ಭಪಾತದ ನಂತರ ಸೋನಾಲಿ ವಾಪಸ್ ಆಗುವ ವೇಳೆ ದಾರಿ ಮಧ್ಯೆ ಅಸುನೀಗಿದ್ದಾಳೆ.
ಆಕೆ ಮೃತಪಟ್ಟಿರುವುದು ಖಚಿತವಾದ ನಂತರ ಆಸ್ಪತ್ರೆ ಸಿಬ್ಬಂದಿ ಅಲ್ಲಿನ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಆ ವೇಳೆ ಘಟನೆ ಸಂಪೂರ್ಣ ಚಿತ್ರಣ ಹೊರಬಿದ್ದಿತ್ತು. ಮೇ ೨೭ರಂದು ಈ ಘಟನೆಗಳು ನಡೆದಿದ್ದು ಗೊತ್ತಾಗಿದೆ.
ಪ್ರಕರಣ ಸಂಬಂಧ ಆಯಾ ಕವಿತಾ ಬಾದನ್ನವರ, ಮೀರಜ್ ಮೂಲದ ದಲ್ಲಾಳಿ ಮಾರುತಿ ಕರವಾಡ ಹಾಗೂ ಸೋನಾಲಿಯ ಸಂಬಂಧಿ ವಿಜಯ ಗೌಳಿ ಎಂಬಾತನನ್ನು ಮಹಾಲಿಂಗಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂರನೆಯದೂ ಹೆಣ್ಣೆಂದು ಗರ್ಭಪಾತ: ಮೃತ ಸೋನಾಲಿ ಕದಂಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದು, ಆಕೆ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಳು. ಹೀಗಾಗಿ ಮಹಾರಾಷ್ಟçದ ಮೀರಜ್‌ನಲ್ಲಿ ಆಕೆಯ ಸ್ಕ್ಯಾನಿಂಗ್ ಮಾಡಿಸಿದ್ದ ವೇಳೆ ಹೆಣ್ಣುಭ್ರೂಣ ಪತ್ತೆಯಾಗಿದೆ. ನಂತರ ಆಕೆಯನ್ನು ದಲ್ಲಾಳಿ ಮಾರುತಿ ಕರವಾಡ ಮೂಲಕ ಕವಿತಾ ಬಳಿ ತರತಂದಿದ್ದು ಸಾಂಗ್ಲಿ, ಮೀರಜ್, ಜತ್ತ ಸೇರಿದಂತೆ ಹಲವು ಭಾಗಗಳ ಜಾಲ ಮಹಾಲಿಂಗಪುರವರೆಗೆ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಮೇ ೨೭ರಂದು ಸೋನಾಲಿ ಗರ್ಭಪಾತದ ನಂತರ ಊರಿಗೆ ಮರಳುವ ವೇಳೆ ಆಕೆ ಕಣ್ಣು ತಿರುಗಿದಂತೆ ಆಗಿದ್ದು, ನಂತರ ಪ್ರಜ್ಞೆ ತಪ್ಪಿದೆ, ಆಸ್ಪತ್ರೆಗೆ ತೆರಳಿದಾಗ ಆಕೆ ಜೀವ ಬಿಟ್ಟಿರುವುದು ಗೊತ್ತಾಗಿದೆ.

ಗರ್ಭಿಣಿ ರಕ್ಷಣೆ
ಮೇ ೨೭ರ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಹಾಲಿಂಗಪುರ ಪೊಲೀಸರು ಕವಿತಾ ಬಾದನ್ನವರ ವಿಚಾರಣೆಗೆ ತೆರಳಿದ ವೇಳೆ ಜತ್ತ ಮೂಲದ ೫ ತಿಂಗಳ ಗರ್ಭಿಣಿ ಕವಿತಾ ಮನೆಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸರು ಗರ್ಭಿಣಿಯನ್ನು ರಕ್ಷಿಸಿ ಇದರ ಹಿಂದೆ ಜಾಲ ಕೆಲಸ ಮಾಡುತ್ತಿದೆಯೇ ಎಂಬುದರ ಪತ್ತೆಗೆ ಜಾಲ ಬೀಸಿದ್ದಾರೆ.

ದಂಧೆ ರೂವಾರಿ ಆಯಾ
ಬಂಧಿತ ಕವಿತಾ ಬಾದನ್ನವರ ಮಹಾಲಿಂಗ ಪುರದ ಆಸ್ಪತ್ರೆಯೊಂದರಲ್ಲಿ ಆಯಾ ಕೆಲಸದಲ್ಲಿ ದ್ದಳು. ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದನ್ನು ನೋಡುತ್ತಲೇ ಕಲಿತಿರುವ ಈಕೆ ಮುಂದೆ ತಾನೇ ಗರ್ಭಪಾತ ಮಾಡುವ ದಂಧೆ ನಡೆಸುತ್ತಿದ್ದಳು ಎನ್ನಲಾಗಿದೆ. ೨೦೨೨ರಲ್ಲಿ ಅನುಮಾನದ ಮೇಲೆ ಆಕೆಯ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಯದಲ್ಲಿ ವಿಚಾರಣೆ ಮುಂದುವರಿದಿದೆ.