ಬಿಆರ್‌ಟಿಎಸ್ ನಿಲ್ದಾಣಗಳಲ್ಲಿ ಸುರಕ್ಷೆಗೆ ಗರ

Advertisement

ಬಿ.ಅರವಿಂದ
ಹುಬ್ಬಳ್ಳಿ: ಬಿಆರ್‌ಟಿಎಸ್ ಬಸ್‌ಗಳು ಮತ್ತು ನಿಲ್ದಾಣಗಳ ಕುರಿತ ಅಪಸ್ವರಗಳು ಹೆಚ್ಚುತ್ತಿರುವದರ ಜೊತೆಗೆ ಪ್ರಯಾಣಿಕರ ಸುರಕ್ಷೆಯ ಬಗ್ಗೆಯೂ ಪ್ರಶ್ನೆಗಳು ಏಳಲಾರಂಭಿಸಿವೆ. ಈ ನಿಲ್ದಾಣಗಳಲ್ಲಿ ಪಿಕ್ ಪಾಕೆಟರ್‌ಗಳು ಮತ್ತು ಪುಂಡ ಪೋಕರಿಗಳಿಂದ ಸಮಸ್ಯೆಯಾಗುತ್ತಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅವಳಿನಗರದ ನಡುವಿನ ಬಿಆರ್‌ಟಿಎಸ್ ನಿಲ್ದಾಣಗಳ ಪೈಕಿ ಕೆಲವೇ ಕೆಲವು ಕಡೆ ಸುರಕ್ಷಾ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್ಗಳು) ಇದ್ದರೆ ಬಹುತೇಕ ಕಡೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಇನ್ನು ಕೆಲವೆಡೆ ಇರುವ ಗಾರ್ಡ್ಗಳು, ಜನರಿಗೆ ಸಹಾಯ-ಸಹಕಾರ ಮಾಡುವುದು ತಮಗೆ ಸಂಬಂಧ ಇಲ್ಲದ ವಿಷಯವೆಂಬಂತೆ ಪ್ರೇಕ್ಷಕರಾಗಿರುತ್ತಾರೆ ಎನ್ನುವ ದೂರುಗಳು ವ್ಯಾಪಕವಾಗಿ ಕೇಳಿ ಬರಲಾರಂಭಿಸಿವೆ.
ನಿಲ್ದಾಣದಲ್ಲಿ ಸೆನ್ಸರ್ ಕೆಲಸ ಮಾಡದೇ ಇರುವುದು ಅಥವಾ ಬಾಗಿಲುಗಳು ಜಾಮ್ ಆಗುವುದರ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಹೋಗಲಿ. ಸುರಕ್ಷೆಯ ವಿಷಯದಲ್ಲಿ ಎದುರಾಗುವ ಸಂಕಷ್ಟಗಳಿಗೆ ಕೂಡ ಈ ಸಿಬ್ಬಂದಿ ಅನೇಕ ಸಂದರ್ಭದಲ್ಲಿ ಸ್ಪಂದಿಸುತ್ತಿಲ್ಲ ಎನ್ನುವ ಆಕ್ರೋಶ ಹಲವು ಪ್ರಯಾಣಿಕರದ್ದಾಗಿದೆ.
ಕೆಲ ದಿನಗಳ ಹಿಂದೆ ಹುಬ್ಬಳ್ಳಿ ಬಿವಿಬಿ ಕಾಲೇಜು ನಿಲ್ದಾಣದ ಬಳಿ ಟಿಕೆಟ್ ಕೊಳ್ಳಲು ಕಾಲೇಜು ಯುವಕನೊಬ್ಬ ಟಿಕೆಟ್ ಕೌಂಟರ್ ಮುಂದೆ ನಿಂತಿದ್ದ. ಆಗ ಆತನ ಗಮನವನ್ನು ಬೇರೆಡೆ ಸೆಳೆದು, ಮರ‍್ನಾಲ್ಕು ಪುಂಡರು ಹಣ ಕಿತ್ತುಕೊಂಡು ಹೋದರು. ಅಲ್ಲಿದ್ದ ಗಾರ್ಡ್ ನಿರ್ಲಕ್ಷ್ಯ ತೋರಿದ್ದ ಎಂದು ವಿದ್ಯಾರ್ಥಿಯ ಪಾಲಕರು ಬೇಸರ ತೋಡಿಕೊಳ್ಳುತ್ತಾರೆ.
ಸೆಕ್ಯೂರಿಟಿ ಗಾರ್ಡ್ ಸ್ಪಂದಿಸಿದ್ದರೆ ಪುಂಡರನ್ನು ಹಿಡಿಯಬಹುದಿತ್ತು. ಆದರೆ ಆತ ತನಗೆ ಸಂಬಂಧಿಸಿದ ವಿಷಯವೇ ಅಲ್ಲವೆಂಬಂತೆ ಕಲ್ಲಾಗಿದ್ದ. ಉಳಿದ ಪ್ರಯಾಣಿಕರು ಹಿಡಿಯಲು ಧಾವಿಸುವಷ್ಟರಲ್ಲಿ ಪುಂಡರು ಬೈಕ್ ಏರಿ ಓಡಿ ಹೋದರು' ಎಂದು ವಿದ್ಯಾರ್ಥಿಯ ತಾಯಿ ಸುರೇಖಾ (ಹೆಸರು ಬದಲಿಸಲಾಗಿದೆ) ಪತ್ರಿಕೆಯ ಮುಂದೆ ಅಳಲು ತೋಡಿಕೊಂಡರು. ಇದು ಇತ್ತೀಚಿನ ಉದಾಹರಣೆಗಳಲ್ಲಿ ಒಂದು. ಇಂತಹ ಅನೇಕ ಘಟನೆಗಳಿಗೆ ಬಿಆರ್‌ಟಿಎಸ್ ಬಸ್ ನಿಲ್ದಾಣಗಳು ಸಾಕ್ಷಿಯಾಗುತ್ತಲೇ ಇವೆ. ಆದರೂ ಸರ್ಕಾರ ಈ ಸೂಕ್ಷ್ಮ ಸಂಗತಿಗಳ ಕಡೆ ಗಮನ ಕೊಡುವುದನ್ನು ಆದ್ಯತೆ ಎಂದುಕೊಂಡಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಲಿಂಗರಾಜ ಹೇಳುತ್ತಾರೆ. ಬಿಆರ್‌ಟಿಎಸ್ ಯೋಜನೆ ಬಂದಾಗ ಒಂದು ಸಭೆಯಲ್ಲಿ ಅಂದಿನ ವ್ಯವಸ್ಥಾಪಕರು,ಇದು ತ್ವರಿತ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ’ ಎಂಬ ಮಾತನ್ನು ಹೇಳಿದ್ದರು. ಆದರೆ ಇದು ತ್ವರಿತವೂ ಅಲ್ಲ. ಅವಳಿನಗರಕ್ಕೆ ಸುರಕ್ಷಿತವೂ ಅಲ್ಲ ಎಂಬುದಾಗಿ ಅವರ ಸ್ನೇಹಿತ ಪ್ರಭಣ್ಣ ಮಠಪತಿ ಸಿಟ್ಟಿನಿಂದ ಹೇಳುತ್ತಾರೆ.
ಎಲ್ಲ ನಿಲ್ದಾಣಗಳಲ್ಲಿ ಗಾರ್ಡ್ಗಳು ಅಥವಾ ಮಾರ್ಷಲ್‌ಗಳು ಕಡ್ಡಾಯವಾಗಿ ಇರುವಂತೆ ಸರ್ಕಾರ ನೋಡಿಕೊಳ್ಳಬೇಕು. ಹಾಗೆಯೇ ಇವರು ಶೋಕೇಸ್ ಬೊಂಬೆಯಂತೆ ನಿಲ್ಲದೇ (ಕೂರದೇ) ಜನರಿಗೆ ಸುರಕ್ಷೆಯ ಅನುಭವ ನೀಡಬೇಕು. ಪಿಕ್‌ಪಾಕೆಟ್ ಮಾಡುವವರು ಅಥವಾ ಹಣ ಕಸಿದುಕೊಂಡು ಹೋಗುವವರ ವಿರುದ್ಧ ಸೆಕ್ಯೂರಿಟಿ ಗಾರ್ಡ್ಗಳು ಗಟ್ಟಿಯಾಗಿ ಕಾರ್ಯಾಚರಣೆ ಮಾಡಬೇಕು ಎಂದು ಅವರು ಒತ್ತಾಯಿಸುತ್ತಾರೆ. ಇದು ಅನೇಕ ಪ್ರಯಾಣಿಕರ ಒಕ್ಕೊರಲ ಅಭಿಪ್ರಾಯವೂ ಆಗಿದೆ.

ಎಲ್ಲಿವೆ ಲಿಫ್ಟ್…?
ಬಿಆರ್‌ಟಿಎಸ್ ಮಾರ್ಗದಲ್ಲಿ ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ನವನಗರ (ಸ್ಯಾಟಲೈಟ್ ಟೌನ್) ಮತ್ತು ಎಸ್‌ಡಿಎಂ ಅತ್ಯಂತ ಆಯಕಟ್ಟಿನ ಜಂಕ್ಷನ್‌ಗಳಾಗಿವೆ. ಇಲ್ಲಿನ ನಿಲ್ದಾಣಗಳಲ್ಲಿನ ಲಿಫ್ಟ್ ಪದೇ ಪದೇ ಕೈಕೊಡುತ್ತಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ.
ಬುಧವಾರ ಕೂಡ ನವನಗರದಲ್ಲಿ ಲಿಫ್ಟ್ ಇಲ್ಲದೇ ಪ್ರಯಾಣಿಕರು, ವಿಶೇಷವಾಗಿ ಹಿರಿಯ ನಾಗರಿಕರು ಪರದಾಡಬೇಕಾಯಿತು ಎಂದು ಜನತೆ ದೂರಿದ್ದಾರೆ. ನವನಗರದಲ್ಲಿ ಇದು ಸಂಭವಿಸುತ್ತಲೇ ಇರುತ್ತದೆ ಎನ್ನುತ್ತಾರವರು. ಆದರೆ ಎಸ್‌ಡಿಎಂ ಮತ್ತು ಹೊಸೂರು ನಿಲ್ದಾಣಗಳಲ್ಲಿಯೂ ಇವೇ ದೂರುಗಳು ಕೇಳಿ ಬರುತ್ತಿರುತ್ತವೆ. ಒಂದೇ ಒಂದು ದಿನ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಇಂತಹ ದೂರುಗಳು ಬರುವುದಿಲ್ಲ.
ಆದರೆ ಬೆಂಗಳೂರು ನಂತರದ ನಗರ, ರಾಜ್ಯದ ರಸ್ತೆ ಮೇಲಿನ ಮೆಟ್ರೋ ಎಂದೆಲ್ಲ `ಗರ್ವ’ ಪಟ್ಟುಕೊಳ್ಳುವ ವ್ಯವಸ್ಥೆಗೆ ಇದು ಏಕೆ ಕಾಣುವುದಿಲ್ಲ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.

ಯಾರೂ ಕೇಳುವರಿಲ್ಲ…
ಬಿಆರ್‌ಟಿಎಸ್ ಪ್ರಯಾಣಿಕರು ಎದುರಿಸುತ್ತಿರುವ ಅವ್ಯವಸ್ಥೆಗಳನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ನಮ್ಮ ಉಪಕಾರಕ್ಕೆ ಎಂಬಂತೆ ಈ ವ್ಯವಸ್ಥೆ ನಡೆಯುತ್ತಿರುವ ಭಾವನೆ ಮೂಡುತ್ತಿದೆ. ನಮ್ಮೊಂದಿಗೆ ನಡೆದುಕೊಳ್ಳುತ್ತಿರುವ ರೀತಿ, ಪ್ರಯಾಣಿಕರಿಗೆ ಅಗತ್ಯವಾದ ಲಿಫ್ಟ್‌ನಂತಹ ಸೌಲಭ್ಯಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದು ಬೇಸರ ತರುತ್ತಿದೆ. ಸರ್ಕಾರ ಏಕೆ ಬಿಆರ್‌ಟಿಯನ್ನು ಕಡೆಗಣಿಸುತ್ತಿದೆ ಗೊತ್ತಾಗುತ್ತಿಲ್ಲ.

ಕೃಷ್ಣ ಶಾಂತಗಿರಿ, ಮಾಧ್ಯಮ ಸಂಸ್ಥೆಯೊಂದರ ಅಧಿಕಾರಿ