ಬಿಜೆಪಿಗಷ್ಟೇ ಸೀಮಿತಗೊಂಡ ಪ್ರಧಾನಿ ಮೋದಿ

Advertisement

ಬಾಗಲಕೋಟೆ: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ವರ್ತಿಸಬೇಕೆ ವಿನಾ ಬಿಜೆಪಿಯ ಪ್ರಧಾನಿಗಳಂತೆ ವರ್ತಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿ ವರದಿ ಸಲ್ಲಿಸಿದ ನಂತರವೂ ಕೇಂದ್ರ ಸರ್ಕಾರ ನಯಾಪೈಸೆಯನ್ನು ನೀಡಿಲ್ಲ. ಪ್ರಧಾನಿ ಮೋದಿ ಅವರು ಕರ್ನಾಟಕದ ಬಗ್ಗೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದು, ಅವರು ದೇಶದ ಪ್ರಧಾನಿ ಎಂಬುದನ್ನು ನೆನಪಿಸಿಕೊಳ್ಳಬೇಕು. ಕೇವಲ ಬಿಜೆಪಿಯ ಪ್ರಧಾನಿಗಳಂತೆ ವರ್ತಿಸಬಾರದು ಇದು ನನ್ನ ವಿನಮ್ರ ಕೋರಿಕೆ ಎಂದರು.
ಬೆಳಗಾವಿಯಲ್ಲಿ ಎಂಇಎಸ್‌ನಿಂದ ಕರಾಳ ದಿನ ಮೆರವಣಿಗೆ ನಡೆದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಆದರೆ ಎಂಇಎಸ್‌ನ ಪುಂಡಾಟಿಕೆಯನ್ನು ನಾವು ಮಟ್ಟಹಾಕಿದ್ದೇವೆ. ನಾಡನುಡಿ, ಜಲದ ವಿಚಾರದಲ್ಲಿ ರಾಜ್ಯ ಸರ್ಕಾರ ಎಂದಿಗೂ ಕಟಿಬದ್ಧವಾಗಿದೆ ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬದಲಾವಣೆ ಆಗಬೇಕಾದರೆ ಅದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯವಾಗಬೇಕು. ಯಾರೋ ಆಚೆಗೆ ಹೇಳಿದರೆ ಹಾಗೆ ಆಗಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿಪ್ರಾಯ ಹೇಳಲು ಅವಕಾಶವಿರುತ್ತದೆ ಹಾಗಂತ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಂದಾಗಿ ಇತರ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನವರು ೨೦೦ ರೂಪಾಯಿ ಖರ್ಚು ಆಗುವಲ್ಲಿ ೧೦ ಸಾವಿರ ಮಾಡಿದ್ದಾರೆ. ಹೀಗಾದರೆ ಅಭಿವೃದ್ಧಿ ಮಾಡುವುದು ಹೇಗೆ ಅದಕ್ಕಾಗಿ ಸಮಯಾವಕಾಶ ಬೇಕೆಂದರು.
ಬಿಟಿಡಿಎ ಕಾರ್ಪಸ್ ಫಂಡ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಪಸ್ ಫಂಡ್ ವಾಪಸ್ ತರುವ ಪ್ರಯತ್ನ ನಡೆದಿದೆ. ನಗಸಭೆ ಕೂಡ ಹಸ್ತಾಂತರಿಸಿಕೊಳ್ಳಲು ತಯಾರಿರಬೇಕು. ಎಲ್ಲವೂ ಮುಳುಗಡೆ ಭೂಸ್ವಾಧೀನದಲ್ಲಿ ಆಗಬೇಕೆಂದು ಹೇಳಿದರೆ ಹೇಗೆ ಎಂದು ಮರು ಪ್ರಶ್ನೆ ಹಾಕಿದರು.
ಬಿಜೆಪಿಯಿಂದ ಸರ್ಕಾರ ಕೆಡವಲು ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಅವರು ಎಂದಿಗೂ ನ್ಯಾಯಯುತವಾಗಿ ಅಧಿಕಾರಕ್ಕೆ ಬಂದಿಲ್ಲ ಅವರು ಕುತಂತ್ರದಿಂದಲೇ ಅಧಿಕಾರಕ್ಕೆ ಬಂದಿದ್ದಾರೆ. ಶಾಸಕ ಯತ್ನಾಳ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಅವರು ಹೇಳಿದ ಯಾವ ವಿಷಯವೂ ಇಂದಿನವರೆಗೆ ನಿಜವಾಗಿಲ್ಲ ಎಂದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವ ತಿಮ್ಮಾಪುರ ಅವರು, ರಮೇಶ ಜಾರಕಿಹೊಳಿ ಬಿಜೆಪಿಗೆ ಹೋಗಿ ಅಲ್ಲಿಯೂ ಮಂತ್ರಿಗಿರಿ ಕಳೆದುಕೊಂಡ ಆತ ಭ್ರಮನಿರಸನ ಆಗಿದ್ದಾನೆ ಏನೇನೋ ಮಾತನಾಡುತ್ತಾನೆ ಎಂದರು. ಡಿ.ಕೆ.ಶಿವಕುಮಾರ ಬಗ್ಗೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು ಅದು ಅವರವರ ವೈಯಕ್ತಿಕ ಎಂದರು.