ಬಿಜೆಪಿಯಿಂದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಅವಮಾನ

Advertisement

ಚಿಕ್ಕಮಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ನಾಲ್ಕೂವರೆ ಕೋಟಿ ಫಲಾನುಭವಿಗಳಿಗೆ ಬಿಜೆಪಿ ನಿರಂತರವಾಗಿ ಅವಮಾನಿಸುತ್ತಿದೆ. ಒಂದು ಕಡೆ ಅವಮಾನಿಸುತ್ತಲೇ ಮತ್ತೊಂದು ಕಡೆ ವಿಪರೀತ ಸುಳ್ಳುಗಳನ್ನು ಹೇಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ನಾನಾ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಬಿಜೆಪಿ ಬೆಂಬಲಿಗರು ಇಲ್ಲವೇ ಸಿ.ಟಿ.ರವಿ? ಈ ಪ್ರಶ್ನೆಗೆ ಬಹಿರಂಗವಾಗಿ ಉತ್ತರಿಸಲು ಬಿಜೆಪಿಗೆ ಸವಾಲು ಹಾಕಿದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳು ರಾಜ್ಯದ ಜನರು ಹಕ್ಕು. ಫಲಾನುಭವಿಗಳನ್ನು ಅವಮಾನಿಸುವುದನ್ನು ತಕ್ಷಣ ನಿಲ್ಲಿಸಿ ಎಂದು ಎಚ್ಚರಿಸಿದರು.
ಐದಕ್ಕೆ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಿಸಿದ ಜಿಲ್ಲೆಯ ಜನತೆಯ ಸಮಯಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು, ನಿಮಗೆ ಬಿಜೆಪಿ ಸರ್ಕಾರದ ಅಚ್ಛೆ ದಿನಗಳು ಬಂದಿದೆಯಾ ಎಂದು ಪ್ರಶ್ನಿಸಿದರು. ನೆರೆದಿದ್ದ ಜನರು ಇಲ್ಲ ಇಲ್ಲ ಎಂದು ಕೂಗಿದರು. ಅಭಿವೃದ್ಧಿ ಶೂನ್ಯ ಬಿಜೆಪಿ, ಸುಳ್ಳುಗಳ ಉತ್ಪಾದನೆ ಮಾಡುತ್ತಿದೆ. ಸುಳ್ಳುಗಳ ಆಧಾರದಲ್ಲೇ ದೇಶವನ್ನು ಆಳುವ ಸರ್ಕಸ್ ಮಾಡುತ್ತಿದೆ. ಬಿಜೆಪಿ ಯಾವಾಗಲೂ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ. ಆದರೆ, ಕಾಂಗ್ರೆಸ್, ಹಸಿವು ಮುಕ್ತ ಭಾರತ ನಿರ್ಮಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ನೀವು ಸ್ವತಂತ್ರ ಭಾರತದ ಇತಿಹಾಸ ನೋಡಿದರೆ ಹಸಿವು ಮುಕ್ತ ಭಾರತಕ್ಕಾಗಿ ಕಾಂಗ್ರೆಸ್ ಏನೆಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಿತು ಎನ್ನುವ ಪಟ್ಟಿಯೇ ಸಿಗುತ್ತದೆ ಎಂದರು.