ಬಿಜೆಪಿ ಟಿಕೆಟ್ ವಂಚನೆ ಮತ್ತೊಂದು ಪ್ರಕರಣ

Advertisement

ಬಳ್ಳಾರಿ(ಕೊಟ್ಟೂರು): ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ಹೇಳಿ ವಂಚಿಸಿದ ಚೈತ್ರಾ ಕುಂದಾಪುರ ಪ್ರಕರಣದಂತೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೂ ಬಿ.ಜೆ.ಪಿ. ಟಿಕೆಟ್ ಕೊಡಿಸುತ್ತೇನೆಂದು ವಂಚಿಸಿರುವ ಮತ್ತೊಂದು ಪ್ರಕರಣ ರಾಜ್ಯದಲ್ಲಿ ಈಗ ತೀವ್ರ ಸಂಚಲನ ಮೂಡಿಸಿದೆ.
ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರ. ಈ ಕ್ಷೇತ್ರಕ್ಕೆ ಬಿ.ಜೆ.ಪಿ. ಟಿಕೆಟ್ ಕೊಡಿಸುತ್ತೇನೆಂದು ಎರಡು ಕೋಟಿ ಮೂರು ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣ ದಾಖಲಾಗಿದೆ. ಚಲವಾದಿ ಜನಾಂಗಕ್ಕೆ ಸೇರಿದ ಸಿ.ಶಿವಮೂರ್ತಿ ಅವರಿಗೆ ಟಿಕೆಟ್ ಕೊಡಿಸುತ್ತೇನೆಂದು ಹೇಳಿ ವಂಚನೆ ಎಸಗಿದ ಪ್ರಕರಣ ಇದಾಗಿದೆ. ಕೊಟ್ಟೂರು ತಾಲ್ಲೂಕು ಬೆನಕನಹಳ್ಳಿ ಗ್ರಾಮದ ಬಿ.ಜೆ.ಪಿ. ಮುಖಂಡ ರೇವಣಸಿದ್ದಪ್ಪ ಅವರು, ತಮಗೆ ಹಿರಿಯ ಮುಖಂಡರ ಪರಿಚಯ ಇದೆ ಎಂದು ಹೇಳಿ ಬಿಜೆಪಿ ಮುಖಂಡರ ಜೊತೆಗಿರುವ ಫೋಟೋಗಳನ್ನು ತೋರಿಸಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಬಿ.ಜೆ.ಪಿ. ಟಿಕೆಟ್ ಕೊಡಿಸುತ್ತೇನೆ ನೀವು ಟಿಕೆಟ್ ಪಡೆಯಲು ಯೋಗ್ಯರು ಎಂದು ಹೇಳಿ ನಂಬಿಸಿ, ಬೆಂಗಳೂರಿಗೆ ಕರೆದುಕೊಂಡು ಹೋಗಿ ಹೋಟೆಲ್ ಒಂದರಲ್ಲಿ ಪುತ್ತೂರಿನ ಇನ್ನೊಬ್ಬ ಬಿಜೆಪಿ ಮುಖಂಡರಾದ ಎನ್.ಪಿ.ಶೇಖರ್‌ರವರನ್ನು ಪರಿಚಯಿಸಿದ್ದು ಇವರಿಬ್ಬರೂ ಸೇರಿ ಶಿವಮೂರ್ತಿ ಅವರನ್ನು ನಂಬಿಸಿ, ಒಟ್ಟೂ ಎರಡು ಕೋಟಿ ಮೂರು ಲಕ್ಷ ರೂ. ಗಳನ್ನು ಪಡೆದಿದ್ದು, ಟಿಕೆಟ್ ಕೊಡಿಸದೇ ವಂಚನೆ ಎಸಗಿದ್ದಾರೆ. ಹಣ ವಾಪಸ್ಸು ಕೇಳಿದರೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನ ಮೇರೆಗೆ ಕೊಟ್ಟೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಎಂ, ಗೃಹ ಸಚಿವರಿಗೆ ಪತ್ರ
ಹಣ ಕಳೆದುಕೊಂಡ ಶಿವಮೂರ್ತಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು ವಿಷಯ ತಿಳಿಸಿ ಮನವಿ ಮಾಡಿದ್ದಾರೆ. ತಮಗೆ ವಂಚನೆ ಮಾಡಿದವರ ಬಗ್ಗೆ ಸಂಪೂರ್ಣ ವಿವರವನ್ನು ಕಳಿಸಿ ಮೋಸ ಮಾಡಿದವರ ಮೇಲೆ ಕ್ರಮ ಕೈಗೊಂಡು ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಶಿವಮೂರ್ತಿ ಕೋರಿದ್ದಾರೆ.
ನಾಲ್ವರು ನಾಯಕರಿರುವ ಈ ತಂಡವು ಹಂತ ಹಂತವಾಗಿ ಒಟ್ಟು ೨ ಕೋಟಿಗೂ ಹೆಚ್ಚು ಹಣ ಪಡೆದಿರುವುದಾಗಿ ಹೇಳಲಾಗಿದೆ. ಕೊಟ್ಟೂರಿನ ಮೋಹನ್, ರೇವಣಸಿದ್ದಪ್ಪ, ಪುತ್ತೂರು ಮೂಲದ ಶೇಖರ್ ಪುರುಷೋತ್ತಮ್ ನಿರ್ಲಕಟ್ಟೆ ಅವರ ಹೆಸರು ಇದರಲ್ಲಿ ಕೇಳಿಬಂದಿದೆ.
ಶಿವಮೂರ್ತಿ ಅವರನ್ನು ೨೦೨೨ ರ ಅಕ್ಟೋಬರ್‌ದಲ್ಲಿ ಪುತ್ತೂರು ಬಿಜೆಪಿ ಮುಖಂಡ ಶೇಖರ್‌ಗೆ ಪರಿಚಯ ಮಾಡಿಸಿದ್ದರು. ಬಳಿಕ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿಸಿದರಂತೆ. ಆದರೆ ನಳೀನ್ ಕುಮಾರ್ ಕಟೀಲ್ ಅವರು ಟಿಕೆಟ್ ವಿಚಾರವನ್ನು ಪುತ್ತೂರಿನ ಶೇಖರ್.ಎನ್.ಪಿ ಬಳಿಯೇ ಮಾತಾಡಿ ಎಂದು ಹೇಳಿ ವಾಪಸ್ಸು ಕಳಿಸಿದ್ದರೆಂದು ಹೇಳಲಾಗಿದೆ. ೨೦೨೨ರ ಅಕ್ಟೋಬರ್‌ನಿಂದ ಶುರುವಾದ ಈ ಹಣದ ವ್ಯವಹಾರ ೨೦೨೩ ರ ಏಪ್ರಿಲ್ ವರೆಗೂ ಮುಂದುವರಿದಿತ್ತು ಎನ್ನಲಾಗಿದೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.