ಬಿಜೆಪಿ ಪ್ರತಿಭಟನೆ: ಪೊಲೀಸ್ ಸರ್ಪಗಾವಲಿನಲ್ಲಿ ಹುಬ್ಬಳ್ಳಿ

Advertisement

ಹುಬ್ಬಳ್ಳಿ: ಕರ ಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆ, ಸೇರಿದಂತೆ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ ಕಲ್ಪಿಸಲಾಗಿದೆ.
2 ಕೆಎಸ್ ಆರ್‌ಪಿ ತುಕಡಿ,1 ಸಿಎಆರ್, 4 ಎಸಿಪಿ, ಇಬ್ಬರು ಡಿಸಿಪಿ‌ಗಳು ಸೇರಿದಂತೆ 500 ಕ್ಕೂ ಅಧಿಕ‌ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಠಾಣೆಯ ಎದುರು ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪೊಲೀಸ್ ಆಯುಕ್ತರ ರೇಣುಕಾ ಸುಕುಮಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ದುರ್ಗದ ಬೈಲ್ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ.
ಕೇವಲ ಶಹರ ಪೊಲೀಸ್ ಠಾಣೆ ಮಾತ್ರವಲ್ಲದೇ ಪೊಲೀಸ್ ಆಯುಕ್ತರ ಕಚೇರಿ, ಚೆನ್ನಮ್ಮ‌ ವೃತ್ತ ಸೇರಿದಂತೆ ಆರೋಪಿಗಳ ಮನೆಗಳ ಬಳಿಯೂ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
ಬೆಳಗ್ಗೆ 11:30 ಪ್ರತಿಭಟನೆ ಆರಂಭವಾಗಲಿದ್ದು, ವಿಪಕ್ಷ ನಾಯಕ‌ ಆರ್ .ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಪ್ರದೀಪ ಶೆಟ್ಟರ ಸೇರಿದಂತೆ ಬಿಜೆಪಿ ಪಾಲಿಕೆ ಸದಸ್ಯರು ಮತ್ತು ನೂರಾರು ಕಾರ್ಯಕರ್ತರು ಸಂಜೆ 4 ಗಂಟೆವರೆಗೂ ಪ್ರತಿಭಟನೆ ನಡೆಸಲಿದ್ದಾರೆ.