ಬಾಗಲಕೋಟೆ/ಲೋಕಾಪುರ: ಲೋಕಾಪುರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದ್ದು, ಕೈ ಮುಖಂಡ ಶಿವಾನಂದ ಉದಪುಡಿ ಕುಟುಂಬಸ್ಥರು ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಮಂಗಳವಾರ ಸಂಜೆ ಲೋಕಾಪುರದ ಪಟಾಕಿ ಮಳಿಗೆ ಮಾಲೀಕ, ಬಿಜೆಪಿ ಮುಖಂಡ ವಿವೇಕಾನಂದ ಹವಳಕೋಡ ಅವರು ತಮ್ಮ ಮಳಿಗೆಯಲ್ಲಿ ಇದ್ದ ವೇಳೆ ಶಿವಾನಂದ ಉದಪುಡಿ ಕುಟುಂಬಸ್ಥರು, ಅವರ ಬೆಂಬಲಿಗರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ವಿವೇಕಾನಂದ ಹವಳಕೋಡ ತಲೆ ಹಾಗೂ ಕೈ ಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿದೆ.
ಘಟನೆ ನಂತರ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದು ಮುಖಂಡರಾದ ಲೋಕಣ್ಣ ಕತ್ತಿ, ಅರುಣ ಕಾರಜೋಳ ನೇತೃತ್ವದಲ್ಲಿ ಲೋಕಾಪುರ ಪೊಲೀಸ್ ಠಾಣೆ ಮುಂಭಾಗ ಧರಣಿ ಆರಂಭಿಸಿದ್ದಾರೆ. ಕಾಂಗ್ರೆಸ್ ನಾಯಕರ ಗೂಂಡಾಗಿರಿ ಮಿತಿಮೀರಿದ್ದು, ಪೊಲೀಸರು ಅವರ ರಕ್ಷಣೆಗೆ ನಿಲ್ಲುತ್ತಿದ್ದಾರೆ. ಬಿಜೆಪಿ ಮುಖಂಡ ಹಲ್ಲೆ ಪ್ರಕರಣದಲ್ಲಿ ಶಿವಾನಂದ ಉದಪುಡಿ ಸೇರಿ ಆರೋಪಿಗಳನ್ನು ಬಂಧಿಸಬೇಕೆಂದು ಪಟ್ಟು ಹಿಡಿದರು.
ಈ ವೇಳೆ ಲೋಕಣ್ಣ ಕತ್ತಿ ಮಾತನಾಡಿ, ನಮ್ಮ ಕಡೆಯೂ ಬಲಾಢ್ಯ ಕಾರ್ಯಕರ್ತರಿದ್ದಾರೆ ಹಾಗಂತ ನಾವು ಕಾಂಗ್ರೆಸ್ ಸಂಸ್ಕೃತಿಯನ್ನು ಮುಂದವರಿಸುವುದಿಲ್ಲ.ಮುಧೋಳ ಕ್ಷೇತ್ರದಲ್ಲಿ ಇವರ ದಬ್ಬಾಳಿಕೆ ಮಿತಿ ಮೀರಿದೆ ಎಂದರು.
ಘಟನೆ ಹಿನ್ನೆಲೆ: ಸೋಮವಾರ ಸಂಜೆ ಲೋಕಾಪುರದಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ ಉಪಸ್ಥಿತಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ವಿವೇಕಾನಂದ ಹವಳಕೋಡ ಅವರು ಶಿವಾನಂದ ಉದಪುಡಿ ಹೆಸರು ಬಳಸಿದೆ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಶಾಲೆಗೆ ತೆರಳಲು ಇದ್ದ ಮಾರ್ಗ ಬಂದ್ ಮಾಡಿ ಕಾಂಪೌಂಡ್ ನಿರ್ಮಾಣ, ಮಲ್ಲಯ್ಯ ದೇವಸ್ಥಾನದ ಮಾರ್ಗ ಹಾಗೂ ಟಿಎಪಿಎಂಎಸ್ ಚುನಾವಣೆ ವಿಷಯ ಪ್ರಸ್ತಾಪಿಸಿದ್ದರಂತೆ ಇದರಿಂದ ಕೆರಳಿದ ಕೈ ಮುಖಂಡರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡರು ದೂರುತ್ತಿದ್ದಾರೆ.