ಬಿಜೆಪಿ ಶಾಸಕರ ಭಾಷಣಕ್ಕೆ ಕೈ ಕಾರ್ಯಕರ್ತರ ಅಡ್ಡಿ

Advertisement

ದಾವಣಗೆರೆ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಮಹತ್ವಾಕಾಂಕ್ಷಿ ಯೋಜನೆಗಳಿಂದ ಜನರಿಗೆ ಆಗುವ ತೊಂದರೆ ಬಗ್ಗೆ ಮಾತನಾಡುವ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆಯಿತು.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾಡಳಿತ, ಬೆಸ್ಕಾಂ ಇಲಾಖೆ ವತಿಯಿಂದ ಆಯೋಜಿಸಿದ್ದ ಗೃಹಜ್ಯೋತಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಮೊದಲು ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಬಳಿಕ ಮಾತನಾಡಿದ ಅವರು, ಈ ಐದು ಗ್ಯಾರಂಟಿ ಯೋಜನೆಗಳಿಂದ ಆಗುವ ಅನುಕೂಲ ಹಾಗೂ ಅದರಿಂದಾಗುವ ತೊಂದರೆ ಬಗ್ಗೆ ಪ್ರಸ್ತಾಪ ಮಾಡಿದರು. ರಾಜ್ಯ ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದಂತೆ ದೇಶದ ಎಲ್ಲಾ ಪಕ್ಷಗಳು ಚುನಾವಣಾ ವೇಳೆ ಇದೇ ರೀತಿ ಆಮಿಷವೊಡ್ಡಿ ಅಧಿಕಾರಕ್ಕೆ ಬಂದು ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ದೇಶದ ಅಭಿವೃದ್ಧಿ ಆಗಲಿದೆಯೇ ಎಂಬುದನ್ನು ಕೂಡ ನಾವು ಚಿಂತಿಸಬೇಕಾಗಿದೆ ಎಂದು ಹೇಳುತ್ತಿದ್ದಂತೆ ಎದ್ದು ನಿಂತ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಭಾಷಣಕ್ಕೆ ಅಡ್ಡಿಪಡಿಸಿದರು.
ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಶಾಸಕರಿಗೆ ನೀವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಬಿಜೆಪಿ ಕೊಟ್ಟ ಭರವಸೆ ಈಡೇರಿಸಿದ್ದೀರ. ದೇಶದ ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಪ್ರಧಾನಿ ಮೋದಿಯವರು ಹೇಳಿದ್ದರು. ಮೋದಿಯವರು ಆಡಳಿತ ನಡೆಸಿ 9 ವರ್ಷ ಆಗಿದೆ. ಇನ್ನು ಅವರ ಖಾತೆಗೆ ಹಣ ಬಿದ್ದಿಲ್ಲ. ಈಗ ಕಾಂಗ್ರೆಸ್ ಸರ್ಕಾರ ನೀಡಿದ ಐದು ಭರವಸೆ ಈಡೇರಿಸಿದೆ. ನೀವು ಗ್ಯಾರಂಟಿ ಮಾತನಾಡುತ್ತೀರ ಎಂದು ಕಾರ್ಯಕರ್ತರು ಪ್ರಶ್ನಿಸಿದರು.
ನೀವು ಕೂಗಾಡುವುದನ್ನು ನಿಲ್ಲಿಸುವವರೆಗೂ ನಾನು ಕೂಗಾಡುತ್ತೇನೆ. ನಾನು ಕೂಡ ದಾವಣಗೆರೆ ಗರಡಿ ಮನೆಯಲ್ಲಿ ಬೆಳೆದವನು. ನನಗೂ ಪಟ್ಟು ಹಾಕಲು ಬರುತ್ತದೆ ಎನ್ನುತ್ತಿದ್ದಂತೆ ವೇದಿಕೆಯತ್ತ ಕೆಲವು ಕಾರ್ಯಕರ್ತರು ಜಮಾಯಿಸಿ ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಮಧ್ಯ ಪ್ರವಶಿಸಿದ ಸಚಿವ ಮಲ್ಲಿಕಾರ್ಜುನ್, ಇದು ಸರ್ಕಾರಿ ಕಾರ್ಯಕ್ರಮ. ಅವರು ಸರ್ಕಾರ ಎಚ್ಚರಿಸುವ ಕೆಲಸ ಮಾಡುವುದು ವಿರೋಧ ಪಕ್ಷದವರ ಕೆಲಸ. ಅವರು ಮಾತನಾಡಲು ಅವಕಾಶ ಮಾಡಿಕೊಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.