ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತ ಕಾಂಗ್ರೆಸಿಗರು

ಸಿ.ಟಿ. ರವಿ
Advertisement

ಹಾವೇರಿ (ರಾಣೇಬೆನ್ನೂರ): ಕಾಂಗ್ರೆಸ್‌ನವರು ಪಕ್ಷ ತೊರೆದು ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ನಾವು ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಬಿಡಬೇಕು ಎಂದು ಆಯ್ಕೆ ಮಾಡಿ ತೆಗೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಡಿ.ಕೆ. ಶಿವಕುಮಾರ ಹೇಳಿಕೆಗೆ ತಿರುಗೇಟು ನೀಡಿದರು.
ಬಿಜೆಪಿ ಹಾಲಿ ಶಾಸಕರೇ ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ ಎಂಬ ಡಿ.ಕೆ. ಶಿವಕುಮಾರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಗುಜರಾತನಲ್ಲಿ ೭೭ ಸ್ಥಾನದಲ್ಲಿ ಕಾಂಗ್ರೆಸ್ ಏನು ಸಾಧನೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಎರಡು ಸ್ಥಾನ ಗೆದ್ದಿದೆ. ಮುಂದೆ ಕರ್ನಾಟಕದಲ್ಲೂ ನೋಡಿ ಕಾಂಗ್ರೆಸ್‌ನಲ್ಲಿ ಮಹಾಭಾರತ ಶುರುವಾಗುತ್ತೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್‌ನವರು ಮಾಡುತ್ತಿರುವುದು ಪ್ರಜಾಧ್ವನಿ ಕಾರ್ಯಕ್ರಮವಲ್ಲ. ಅದು ಕಾಂಗ್ರೆಸ್ ಧ್ವನಿ ಎಂದು ವ್ಯಂಗ್ಯವಾಡಿದ ರವಿ, ಪ್ರಜಾಧ್ವನಿ ಎಂದರೆ ಜನ ಮಾತನಾಡುವುದು. ಆದರೆ, ಇಲ್ಲಿ ಜನ ಯಾರೂ ಮಾತನಾಡಲ್ಲ. ಕಾಂಗ್ರೆಸ್‌ನವರು ಮಾತ್ರ ಮಾತನಾಡುತ್ತಾರೆ. ಆರೇಳು ಸಾವಿರ ಜನ ಸೇರಿಸಿದರೆ ಪ್ರಜಾಧ್ವನಿ ಹೇಗಾಗುತ್ತೆ. ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್ ಧ್ವನಿ ಎಂದರು.