ಬಿಜೆಪಿ ಸೇರಿದ ಕಾಂಗ್ರೆಸ್‌ ಮಾಜಿ ಶಾಸಕ ತಿಪ್ಪೇಸ್ವಾಮಿ

Advertisement

ಚಿತ್ರದುರ್ಗ: ಶ್ರೀರಾಮುಲು ವಿರುದ್ಧ ತೊಡೆ ತಟ್ಟಿ ನಿಂತಿದ್ದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಅವರು ಜಿಲ್ಲೆಯ ಹಿರಿಯ ಬಿಜೆಪಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಸಮ್ಮುಖದಲ್ಲಿ ರಾಜಿಯಾಗಿದ್ದಾರೆ. ಹಾಗೆಯೇ ತಿಪ್ಪೇಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಬಿಜೆಪಿಯ ಹಿರಿಯ ಶಾಸಕ, ತಿಪ್ಪಾರೆಡ್ಡಿಯವರ ನೇತೃತ್ವದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಜಿಲ್ಲೆಯ ಖ್ಯಾತ ಗುರುಪೀಠವಾದ ನಾಯಕನಹಟ್ಟಿ ಶ್ರೀ ತಿಪ್ಪೇಸ್ವಾಮಿ ಗುರುಗಳ ಸನ್ನಿಧಾನದ ಮುಂದೆ ತಿಪ್ಪಾರೆಡ್ಡಿಯವರು ತಿಪ್ಪೇಸ್ವಾಮಿಯವರನ್ನು ಹಾರ ಹಾಕಿ ಸಾಂಕೇತಿಕವಾಗಿ ಬಿಜೆಪಿಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ, ಸಚಿವ ಶ್ರೀರಾಮುಲು ಕೂಡ ಇದ್ದರಲ್ಲದೆ, ತಿಪ್ಪೇಸ್ವಾಮಿಯವರಿಗೆ ಪಕ್ಷದ ಬಾವುಟನ್ನು ಕೊಟ್ಟು ಬರಮಾಡಿಕೊಂಡರು. ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಮುಂಭಾಗ ಭೇಟಿಯಾಗಿ ಕೊರಳಿಗೆ ಪುಷ್ಪ ಮಾಲೆ ಧರಿಸಿಕೊಂಡು ಇಬ್ಬರು ನಾಯಕರು ಕೈ ಕೈ ಹಿಡಿದು ರಾಜೀಯಾದರು. ರಾಜಿ ಬಳಿಕ ನಾಯಕರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳಗೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಳೆದ ಚುನಾವಣೆಯಲ್ಲಿ ಶ್ರೀರಾಮುಲು ಬೆಂಬಲಿಗರು ಹಾಗೂ ತಿಪ್ಪೇಸ್ವಾಮಿ ನಡುವೆ ದ್ವೇಷ ಭುಗಿಲೆದ್ದಿದ್ದಾಗ, ಹಿರಿಯ ಶಾಸಕ ತಿಪ್ಪಾರೆಡ್ಡಿಯವರ ಬೆಂಬಲಿಗರು ಹಾಗೂ ತಿಪ್ಪೇಸ್ವಾಮಿಯವರ ಬೆಂಬಲಿಗರ ನಡುವೆ ಗಲಾಟೆಗಳಾಗಿದ್ದವು. ಆದರೀಗ, ಇಬ್ಬರೂ ಒಂದಾಗಿದ್ದಾರೆ.