ಬಿಜೆಪಿ ೨೦೦ ಸ್ಥಾನ ದಾಟಲ್ಲ

Advertisement

ಧಾರವಾಡ: ಬಿಜೆಪಿ ಮತಪತ್ರ ಮತ್ತು ಮತಪೆಟ್ಟಿಗೆ ಮೂಲಕ ಚುನಾವಣೆ ನಡೆಸಿದರೆ ೨೦೦ ಸ್ಥಾನವನ್ನೂ ದಾಟುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಕಾಂಗ್ರೆಸ್‌ಗೆ ಉತ್ತಮ ಅವಕಾಶವಿದೆ. ಬಿಜೆಪಿಯವರು ಅಬಕಿ ಬಾರ್ ೪೦೦ ಪಾರ್ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ, ಮತಪತ್ರದ ಮೂಲಕ ಚುನಾವಣೆ ನಡೆಸಿದರೆ ೨೦೦ ಸ್ಥಾನವನ್ನೂ ಅವರು ಗೆಲ್ಲುವುದಿಲ್ಲ. ಇವಿಎಂ ಬಗೆಗೆ ಸಾಕಷ್ಟು ಜನರು ಹೋರಾಟ ಮಾಡುತ್ತಿದ್ದಾರೆ. ಇದರ ಬಗೆಗೆ ಜನರಿಗೆ ಸಂಶಯವೂ ಇದೆ. ಅದನ್ನು ಟ್ಯಾಂಪರ್ ಮಾಡಿದ ಸಾಕ್ಷಿಯೂ ಇದೆ ಎಂದರು.
ಎಲೆಕ್ಟ್ರಾಲ್ ಸಿಸ್ಟಮ್‌ನಲ್ಲಿ ನ್ಯಾಯಾಂಗದ ಸದಸ್ಯರು ಇರಬೇಕು. ಆದರೆ, ಬಿಜೆಪಿಯವರು ಅವರನ್ನು ಯಾವ ಉದ್ದೇಶಕ್ಕಾಗಿ ತೆಗೆದರು ಎನ್ನುವುದು ತಿಳಿಯುತ್ತಿಲ್ಲ. ಅದರಲ್ಲಿರುವ ನಾಲ್ವರು ನಿರ್ದೇಶಕರು ಬಿಜೆಪಿಯವರೇ ಇದ್ದಾರೆ. ಅದಕ್ಕಾಗಿ ಇವೆಲ್ಲವನ್ನು ಮುಚ್ಚಿ ಹಾಕಲು ಬಿಜೆಪಿ ಹೀಗೆಲ್ಲ ಮಾಡುತ್ತಿದೆ ಎಂದು ದೂರಿದರು.
ಒಂದೆಡೆ ಸಾವಿರ ರೂ. ಸಿಲಿಂಡರ್‌ಗೆ ಹೆಚ್ಚಳ ಮಾಡಿ ಪುನಃ ೧೦೦ ರೂ. ಕಡಿಮೆ ಮಾಡುತ್ತೇವೆ ಎಂದರೆ ಏನು ಪ್ರಯೋಜನ. ಬಿಜೆಪಿ ಮತ್ತು ಮೋದಿ ಅವರ ಕೆಲಸಗಳು ಅವರಿಗೆ ಮಾತ್ರವೇ ಲಾಭವಾಗಿವೆ ಹೊರತು ಜನರಿಗೆ ಯಾವುದೇ ಲಾಭವಾಗಿಲ್ಲ. ರೈತರು, ಬಡವರು, ಕೂಲಿ ಕಾರ್ಮಿಕರು ನಿತ್ಯ ಪರದಾಡುವ ಸ್ಥಿತಿ ಇದೆ. ಹಾಗಿದ್ದರೆ ಬಿಜೆಪಿ ಈ ವರ್ಗಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸಿದರು.