ವಿಧಾನಪರಿಷತ್
‘ಬಿಟ್ರೆ ರಾಥೋಡ್ ಅವ್ರು ನಿಮ್ ಕುರ್ಚಿಗೆ ಬಂದು ಕೂತ್ಕೋತಾರೆ, ಹುಷಾರು’ ಹೀಗೆಂದು ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯ ಬಸವರಾಜ ಹೊರಟ್ಟಿ ಹೇಳಿದಾಗ ಗದ್ದಲ-ಗಲಾಟೆಯ ನಡುವೆಯೂ ಸದನದಲ್ಲಿ ನಗುವಿನ ಅಲೆ.
ಬುಧವಾರ ಭೋಜನ ವಿರಾಮದ ಬಳಿಕ ನಡೆದ ಮೇಲ್ಮನೆ ಕಲಾಪದಲ್ಲಿ ‘ಬಿಜೆಪಿ ನಲವತ್ತು ಪರ್ಸೆಂಟೇಸ್ ಕಮಿಷನ್ ಸರ್ಕಾರ’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು. ಇದರಿಂದ ಉಂಟಾದ ತೀವ್ರ ಗದ್ದಲದಿಂದಾಗಿ ಹತ್ತು ನಿಮಿಶಗಳ ಕಾಲ ಕಲಾಪವು ಮುಂದೂಡಲ್ಪಟ್ಟಿತ್ತು. ಬಳಿಕ ಕಲಾಪ ಮತ್ತೆ ಆರಂಭಗೊಂಡಾಗ, ಕಾಂಗ್ರಸ್ ಸದಸ್ಯರು ಗದ್ದಲ ಮುಂದುವರಿಸಿದರು. ಈ ವೇಳೆ ಎದ್ದು ನಿಂತ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ನಮ್ಮ ಸರ್ಕಾರದ ವಿರುದ್ಧ ನಲವತ್ತುಪರ್ಸೆಂಟೇಸ್ ಆರೋಪ ಮಾಡುವುದಕ್ಕೆ ನಿಮ್ಮ ಬಳಿ ಆಧಾರವೇನಿದೆ? ಎಂದಾಗ ಉಭಯ ಪಕ್ಷಗಳ ನಡುವೆ ಕಿಡಿ ಹೊತ್ತಿತು.
‘ಈ ಹಿಂದೆ ನಿಮ್ಮ ಪ್ರಧಾನಿಯವರು ರಾಜ್ಯಕ್ಕೆ ಬಂದಾಗ, ‘ಕಾಂಗ್ರೆಸ್ ಸರ್ಕಾರ ಟೆನ್ ಪರ್ಸೆಂಟೇಜ್ ಕಮಿಷನ್ ಸರ್ಕಾರ’ವೆಂದು ಆರೋಪಿಸಿದ್ದರಲ್ಲವೆ? ನಿಮ್ಮ ಬಳಿ ಅದಕ್ಕೇನಿದೆ ಆಧಾರ? ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದರು. ಈ ವೇಳೆ ಕೆಲ ಹೊತ್ತು ಪರಸ್ಪರ ಮಾತಿನ ಚಕಮಕಿ. ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಎನ್.ರವಿಕುಮಾರ್, ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ತೇಜಸ್ವಿನಿ ಗೌಡ, ಎಂ.ಕೆ.ಪ್ರಾಣೇಶ್ ಸೇರಿದಂತೆ ಮೊದಲಾದವರು ಆ ಕಡೆಯಿಂದ ಮಾತಿನ ಚಾಟಿ ಬೀಸಿದರು. ಈಗ ಮಧ್ಯೆ ಪ್ರವೇಶಿಸಿದ ಸಭಾಪತಿ ರಘುನಾಥ್ ಮಲ್ಕಾಪುರೆ ಅವರು ಗಲಾಟೆಗೆ ನಿಂತ ಸದಸ್ಯರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ‘ಇದು ಚಿಂತಕರ ಚಾವಡಿ. ಜನ ನಮ್ಮನ್ನೆಲ್ಲ ಗಮನಿಸುತ್ತಿರುತ್ತಾರೆ ಎಂಬುದನ್ನು ಯಾರೂ ಮರೆಯಬಾರದು. ನಿಯಮ ೬೮ರ ಅಡಿಯಲ್ಲಿ ಚರ್ಚೆ ನಡೆಯುತ್ತಿದೆ. ಬೇರೆ ವಿಷಯಕ್ಕೆ ನಾನು ಆಸ್ಪದ ಕೊಡುವುದಿಲ್ಲ’ ಎಂದು ಖಡಕ್ಕಾಗಿ ಹೇಳಿದರು.
ಇಷ್ಟಾದರೂ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಮಾತನಾಡಲು ಶುರು ಮಾಡಿದಾಗ ಗರಂ ಆದ ಸಭಾಪತಿಯವರು, ‘ ರೀ ರಾಥೋಡ್ ನಾನು ಏನ್ ಹೇಳ್ತಾ ಇದ್ದೀನಿ.. ನನ್ನ ಮಾತು ಕೇಳಲ್ಲವೆಂದರೆ ನೀವೇ ಇಲ್ಲಿ ಬಂದು ಮಾತನಾಡಿ’ ಎಂದು ಗದರಿದರು. ಈ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ‘ನೀವು ಹಾಗೆ ಹೇಳಿದರೆ, ರಾಥೋಡ್ ನಿಮ್ ಕುರ್ಚಿಗೆ ಹಾರಿ ಬಂದು ಕೂತ್ಕಾರೆ ನೋಡಿ ಹುಷಾರು..’ ಎಂದು ಹಾರಿಸಿದ ಹಾಸ್ಯ ಚಟಾಕಿ ಗೌಜು-ಗದ್ದಲದ ನಡುವೆಯೂ ಕೆಲ ಕ್ಷಣ ಸಭೆಯನ್ನು ನಗೆಗಡಲಲ್ಲಿ ತೇಲಿಸಿತು. ಆದಾಗ್ಯೂ ಉಭಯ ಪಕ್ಷಗಳ ಸದಸ್ಯರು ಗದ್ದಲವನ್ನು ಮತ್ತೆ ಮುಂದುವರಿಸಿದಾಗ ಸಭಾಪತಿಯವರು ಸದನದ ಕಲಾಪವನ್ನು ನಾಳೆಗೆ ಮುಂದೂಡಿದರು.