ಬಿಹಾರ ಜಾತಿ ಸಮೀಕ್ಷೆ ಉತ್ತರ ಕಾಣದ ಪ್ರಶ್ನೆಗಳು

Advertisement

ಬಿಹಾರ ಜಾತಿ ಸಮೀಕ್ಷೆಯಿಂದ ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಶೇ ೫೦ ಮೀಸಲಾತಿ ಲಕ್ಷ್ಮಣರೇಖೆಯನ್ನು ಪುನರ್ ವಿಮರ್ಶಿಸುವ ಕಾಲ ಬರಲಿದೆ. ೨೦೨೪ ಲೋಕಸಭೆ ಚುನಾವಣೆಯ ಮೇಲೆ ಈ ಸಮೀಕ್ಷೆ ಪ್ರಭಾವ ಇದ್ದೇ ಇರುತ್ತದೆ.

ಬಿಹಾರದಲ್ಲಿ ನಿತೀಶ್ ಕುಮಾರ್ ಜಾತಿ ಸಮೀಕ್ಷೆಯನ್ನು ಪ್ರಕಟಿಸಿ ಇಡೀ ದೇಶದಲ್ಲಿ ಪ್ರಶ್ನೆಗಳ ಸುನಾಮಿ ಎಬ್ಬಿಸಿದ್ದಾರೆ. ಇವುಗಳಿಗೆ ಅಂತಿಮವಾಗಿ ಸುಪ್ರೀಂ ಕೋರ್ಟ್ ಪರಿಹಾರ ನೀಡಬೇಕಾದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಬರುವ ನಿರೀಕ್ಷೆಇದೆ. ಈಗ ಬಿಹಾರದ ಸಮೀಕ್ಷೆಯಂತೆ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಂತೆ ೨೦೨೪ ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಸೀಟುಗಳನ್ನು ನೀಡಬೇಕಾಗುತ್ತದೆ. ಅಧಿಕಾರ ಹಂಚಿಕೆಯಲ್ಲೂ ಹಿಂದುಳಿದ ವರ್ಗ ಪ್ರಧಾನ ಪಾತ್ರವಹಿಸಲಿದೆ. ಬಿಹಾರದ ಪ್ರಭಾವ ಕರ್ನಾಟಕದ ಮೇಲೂ ಆಗಲಿದೆ. ಏಕೆಂದರೆ ಕರ್ನಾಟಕ ಈಗಾಗಲೇ ಜಾತಿ ಸಮೀಕ್ಷೆ ನಡೆಸಿದೆ. ಅದರ ವರದಿ ಇನ್ನು ಬಹಿರಂಗಗೊಂಡಿಲ್ಲ. ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದ್ದಾರೆ. ಇದನ್ನು ಸ್ವೀಕರಿಸಿದರೆ ಈಗ ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯದವರು ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡಬೇಕಾಗುತ್ತದೆ.
ಇದೇರೀತಿ ಬೇರೆ ರಾಜ್ಯಗಳಲ್ಲೂ ಇದರ ಪ್ರಭಾವ ಆಗಲಿದೆ. ಪ್ರತಿಪಕ್ಷಗಳು ಜಾತಿ ಸಮೀಕ್ಷೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತ ಬಂದಿದೆ. ಈಗ ಒತ್ತಡ ಮತ್ತಷ್ಟು ಅಧಿಕಗೊಳ್ಳಬಹುದು. ಇದುವರೆಗೆ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಲ್ಲ. ೧೯೩೧ ರಲ್ಲಿ ಬ್ರಿಟಿಷರು ಜಾತಿ ಸಮೀಕ್ಷೆ ನಡೆಸಿದ್ದರು. ನಂತರ ಜಾತಿ ಸಮೀಕ್ಷೆಗೆ ಒಲವು ತೋರಿಲ್ಲ. ೧೯೭೯ ರಲ್ಲಿ ಮಂಡಲ್ ಆಯೋಗದ ವರದಿ ಇಡೀ ದೇಶದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಮಂಡಲ್-ಕಮಂಡಲ ಹೋರಾಟ ನಡೆದಿತ್ತು. ಮಂಡಲ್ ಆಯೋಗವೇ ಹಿಂದುಳಿದವರ್ಗಗಳು ಶೇ ೫೨ ಇದೆ ಎಂದು ಹೇಳಿತ್ತು. ಆಗ ಸುಪ್ರೀಂ ಕೋರ್ಟ್ ಶೇ.೫೦ಕ್ಕಿಂತ ಹೆಚ್ಚು ಮೀಸಲಾತಿ ನೀಡುವಂತಿಲ್ಲ ಎಂದು ನಿರ್ಬಂಧ ವಿಧಿಸಿದ್ದರಿಂದ ಹಿಂದುಳಿದ ವರ್ಗಕ್ಕೆ ಶೇ.೨೭ಕ್ಕೆ ಮೀಸಲಾತಿಯನ್ನು ಮಿತಗೊಳಿಸಬೇಕಾಗಿ ಬಂದಿತು. ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೆನೆಪದರ ಜಾರಿಗೆ ತರಲು ಸೂಚಿಸಿತ್ತು. ಅದರ ನಂತರ ರೋಹಿಣಿ ಆಯೋಗದ ವರದಿ ಬಂದಿದ್ದು ರಾಷ್ಟ್ರಪತಿ ಮುಂದೆ ಇದೆ. ಇದಕ್ಕೆ ಈಗ ಜೀವ ಬರುವ ಸಾಧ್ಯತೆ ಇದೆ.
ಅಲ್ಲದೆ ಈ ಜಾತಿ ಸಮೀಕ್ಷೆಯ ವರದಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಶೇಕಡ ೫೦ಕ್ಕೆ ಮೀಸಲಾತಿ ಮಿತಿಯನ್ನು ಮರುಪರಿಶೀಲಿಸಲು ಮತ್ತೆ ಸಂವಿಧಾನಪೀಠ ರಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಚುನಾವಣೆಗಳಲ್ಲಿ ಈ ಸಮೀಕ್ಷೆಯ ನೆರಳು ಬೀಳುವುದಂತೂ ಖಚಿತ. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಮೀಸಲು ಪ್ರಮಾಣವನ್ನು ವಿಸ್ತರಿಸಬೇಕೆಂದು ಒತ್ತಾಯಿಸುತ್ತಿವೆ. ಇತ್ತೀಚೆಗೆ ಲೋಕಸಭೆ ಅಂಗೀಕರಿಸಿದ ಮಹಿಳಾ ವಿಧೇಯಕದಲ್ಲೂ ಹಿಂದುಳಿದ ವರ್ಗದ ಮಹಿಳೆಯರಿಗೆ ಮೀಸಲಾತಿ ನೀಡಲು ಒತ್ತಾಯ ಕೇಳಿಬಂದಿತ್ತು. ಅದಕ್ಕೆ ಈಗ ಮತ್ತೆ ಜೀವ ಬರಲಿದೆ. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ರಾಜಕೀಯ ಅಧಿಕಾರ ಅಧಿಕಗೊಂಡಂತೆ ಸರ್ಕಾರಗಳ ಆದ್ಯತೆಗಳೇ ಬದಲಾಗಬಹುದು. ಬಜೆಟ್ ಮೇಲೆ ಹೆಚ್ಚಿನ ಪರಿಣಾಮ ಆಗಲಿದೆ. ನಿತೀಶ್ ಕುಮಾರ್ ಕೂಡ ಇದನ್ನೇ ಹೇಳಿದ್ದಾರೆ. ಆರ್ಥಿಕ ಸಾಮಾಜಿಕ ಕಾರ್ಯಕ್ರಮಗಳ ಸ್ವರೂಪವೇ ಬದಲಾಗಲಿದೆ. ಬಿಜೆಪಿ ಸೇರಿದಂತೆ ಎಲ್ಲ ರಾಷ್ಟ್ರೀಯ ಪಕ್ಷಗಳು ತಮ್ಮ ನೀತಿ-ಧೋರಣೆಗಳಲ್ಲಿ ಬದಲಾವಣೆ ತರಬೇಕಾದ ಪರಿಸ್ಥಿತಿ ಬರಬಹುದು. ಈ ವಿಷಯದಲ್ಲಿ ಈಗಾಗಲೇ ಎಲ್ಲ ಕಡೆ ಚರ್ಚೆಗಳು ನಡೆಯುತ್ತಿವೆ. ಇದುವರೆಗೆ ಹಿಂದೂ ಮತ್ತು ಇತರರು ಎಂಬ ವರ್ಗೀಕರಣ ಹೋಗಿ ಆರ್ಥಿಕವಾಗಿ ಹಿಂದುಳಿದ ಹಾಗೂ ಮುಂದುವರಿದವರ ನಡುವೆ ವರ್ಗ ಸಂಘರ್ಷ ನಡೆದು ರಾಜಕೀಯ ಅಧಿಕಾರದ ಹಂಚಿಕೆ ಪ್ರಧಾನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.