ಬೆಂ-ಮೈ ಹೆದ್ದಾರಿಯಲ್ಲಿ ಅಪಘಾತ ಕಡಿಮೆಯಾಗಿದೆ

Advertisement

ಮಂಡ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಸಕ್ಕರೆ ನಾಡಿಗೆ ಆಗಮಿಸಿ ಬೆಂಗಳೂರು – ಮೈಸೂರು ಹೆದ್ದಾರಿ ವೀಕ್ಷಿಸಿ,ಲೋಪ ದೋಷದ ಬಗ್ಗೆ ಪರಿಶೀಲಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಅಪಘಾತ ಹೆಚ್ಚಾಗಿ ಸಾವು-ನೋವು ಸಂಭವಿಸುತ್ತಿರುವ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪರಿಶೀಲಿಸಿ ಅಪಘಾತ ತಡೆ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಉಮ್ಮಡಹಳ್ಳಿ ಗೇಟ್ ಬಳಿ ಅವರು ಮಾತನಾಡಿ, ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ವೇಗಮಿತಿ ಇಲ್ಲದ ಕಾರಣ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದವು, ಜೂನ್ ತಿಂಗಳಲ್ಲೇ ಹೆಚ್ಚು ಅಪಘಾತ ಆಗಿದ್ದವು. ಇದೀಗ ಪೋಲಿಸ್ ಇಲಾಖೆ ವಾಹನಗಳ ವೇಗಕ್ಕೆ ಕಡಿವಾಣ ಹಾಕಿರುವ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಅಪಘಾತ ಪ್ರಮಾಣ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹೆದ್ದಾರಿ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವಜ್ಞಾನಿಕ ಅಂತಲ್ಲ, ಸುರಕ್ಷತಾ ಕ್ರಮ ಆಗಬೇಕಿದೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಲಾಗಿದೆ ಎಂದರು.
ಹೆದ್ದಾರಿಯಲ್ಲಿ ಇನ್ನುಳಿದ ಕಾಮಗಾರಿಗೆ 150 ಕೋಟಿ ರೂ ಅನುದಾನಕ್ಕೆ ಅನುಮೋದನೆ ದೊರೆತಿದೆ, ಹೆದ್ದಾರಿ ವ್ಯಾಪ್ತಿಯ ನಗರಗಳಲ್ಲಿ ಬೈಪಾಸ್ ರಸ್ತೆ, ಅಂಡರ್ ಪಾಸ್, ಮೂಲಸೌಕರ್ಯ ಅಷ್ಟೇ ಅಲ್ಲದೆ ಸರ್ವಿಸ್ ರಸ್ತೆ ಸಮರ್ಪಕ ನಿರ್ಮಾಣಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು
ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ನಮ್ಮ ವ್ಯಾಪ್ತಿಯಲಿಲ್ಲ,ಹೆದ್ದಾರಿ ಪ್ರಾಧಿಕಾರ ಅದನ್ನು ಮಾಡುತ್ತಿದೆ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು
ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ವಿಡಿಯೋ ಚಿತ್ರೀಕರಣದ ಬಗ್ಗೆ ಪೊಲೀಸರು ಎಫ್ಐಆರ್ ದಾಖಲೆಸಿದ್ದು. ತನಿಖೆ ಪ್ರಗತಿಯಲ್ಲಿದೆ, ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು, ಬಿಜೆಪಿ ಪಕ್ಷದವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ,ಜಿಲ್ಲಾಧಿಕಾರಿ ಡಾ. ಕುಮಾರ ಅಪರ ಜಿಲ್ಲಾಧಿಕಾರಿ ಡಾ. ಎಚ್ ಎಲ್ ನಾಗರಾಜು, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಇತರರಿದ್ದರು.