ಬೆಣ್ಣೆ ಹಳ್ಳದಲ್ಲಿ ಕೊಚ್ಚಿಹೋದ ಯುವಕನ ಪತ್ತೆಗೆ ಬೆಳಿಗ್ಗೆ ಕಾರ್ಯಾಚರಣೆ ಆರಂಭ

Advertisement


ಹುಬ್ಬಳ್ಳಿ : ಸೋಮವಾರ ಮಧ್ಯಾಹ್ನ ಉಕ್ಕಿ ಹರಿಯುತ್ತಿದ್ದ ಬೆಣ್ಣೆ ಹಳ್ಳದಲ್ಲಿ ಈಜಲು ನಾಲ್ವರು ಗೆಳೆಯರೊಂದಿಗೆ ಹೋಗಿದ್ದಾಗ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಹುಬ್ಬಳ್ಳಿ ತಾಲ್ಲೂಕು ಬ್ಹಾಹಟ್ಟಿ ಗ್ರಾಮದ ಆನಂದ ಹಿರೇಗೌಡರ ಪತ್ತೆಗೆ ತಹಶೀಲ್ದಾರ ಪ್ರಕಾಶ ನಾಶಿ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ಮತ್ತೆ ಪತ್ತೆಕಾರ್ಯಾಚರಣೆ ಶುರುವಾಗಿದೆ.
ಅನಂದ ಅವರ ತಾಯಿ ಆಶಾ ಕಾರ್ಯಕರ್ತೆಯಾಗಿದ್ದು , ಅವರಿಗೆ ಆನಂದ ಒಬ್ಬನೇ ಮಗನಾಗಿದ್ದಾನೆ. ಹಳ್ಳದಲ್ಲಿ ಮಗ ಕೊಚ್ಚಿಕೊಂಡು ಸುದ್ದಿ ತಿಳಿಯುತ್ತಿದ್ದಂತೆ ಅವರ ತಾಯಿ ಇಂದುಮತಿ ಅವರು ಆಘಾತಕ್ಕೀಡಾಗಿದ್ದಾರೆ.
ಸೋಮವಾರ ರಾತ್ರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ತಹಶೀಲ್ದಾರ ಪ್ರಕಾಶ ನಾಶಿ ಅವರು ಮನೆಗೆ ಭೇಟಿ ನೀಡಿ ಧೈರ್ಯ ಹೇಳಿದ್ದರು.
ಯುವಕನ ಪತ್ತೆಗೆ ಮಂಗಳವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ. ಎರಡು ಬೋಟ್, ಮುಳುಗು ತಜ್ಞರ ಬಳಸಿಕೊಂಡು ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ತಹಶೀಲ್ದಾರ ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ನಾಲ್ವರು ಯುವಕರು ಬೆಣ್ಣೆ ಹಳ್ಳ ಉಕ್ಕಿ ಹರಿಯುವುದನ್ನು ನೋಡಲು ಹೋಗಿದ್ದರು. ಗ್ರಾಮಸ್ಥರು ಹಳ್ಳದ ದಂಡೆಯಿಂದ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದರು. ಈ ವೇಳೆ ಈಜುವ ಉಮೇದಿಯಲ್ಲಿ ಗೆಳೆಯರೊಂದಿಗೆ ಅನಂದ ಹಿರೇಗೌಡರ ಹಳ್ಳಕ್ಕೆ ಜಿಗಿದಿದ್ದಾನೆ. ಹಳ್ಳದ ರಭಸದ ಅರಿವಾಗಿ ಇಬ್ಬರು ಯುವಕರು ಈಜಿ ದಡಕ್ಕೆ ಬಂದಿದ್ದಾರೆ. ಮತ್ತೊಬ್ಬ ಹಳ್ಳದಲ್ಲಿ ಸಿಕ್ಕ ಗಿಡದ ಕೊಂಬೆ ಹಿಡಿದು ರಕ್ಷಣೆಗೆ ಕೋರಿದ್ದಾನೆ. ಈ ವೇಳೆ ಆತನನ್ನು ಗ್ರಾಮಸ್ಥರ ನೆರವಿನಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಅತ್ತ ಆನಂದ ಹಿರೇಗೌಡರ ನೋಡು ನೋಡುತ್ತಿದ್ದಂತೆಯೇ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಯುವಕ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.