ಬೆಳದಡಿಯಲ್ಲಿ ಶ್ರೀರಾಮನಿಗೆ ನಿತ್ಯ ಪೂಜೆ

Advertisement

ಸೂರ್ಯನಾರಾಯಣ ನರಗುಂದಕರ
ಗದಗ: ಗದಗ ತಾಲೂಕಿನ ಬೆಳದಡಿಗೂ ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನಿಗೂ ಅವಿನಾಭಾವ ಸಂಬಂಧವಿದ್ದು ಅದರ ನೆನಪಿಗಾಗಿ ಗ್ರಾಮದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾದೇವಿ ಹಾಗೂ ಹನುಮಾನ್ ಮೂರ್ತಿಗಳ ಪ್ರತಿಷ್ಠಾಪನೆಗೊಂಡಿದ್ದು ಪ್ರತಿನಿತ್ಯ ಪೂಜೆಗೊಳ್ಳುತ್ತಿವೆ.
ಶ್ರೀರಾಮ ಹಾಗೂ ಲಕ್ಷ್ಮಣರು ಸೀತಾನ್ವೇಷಣೆ ಮಾಡುವಾಗ ಗದಗ ಜಿಲ್ಲೆಯ ಮಾರ್ಗವಾಗಿ ಹೋಗಿರುವ ಕುರುತು ಐತಿಹ್ಯವಿದೆ. ಅಂದು ದಟ್ಟ ಅರಣ್ಯ ಪ್ರದೇಶವಾಗಿದ್ದ ಬೆಳದಡಿ ಗ್ರಾಮದಲ್ಲಿ ಶ್ರೀರಾಮ ಹಾಗೂ ಲಕ್ಷ್ಮಣರು ಒಂದು ದಿನ ವಾಸ್ತವ್ಯ ಮಾಡಿದ್ದರು. ೧೨೭ ವರ್ಷಗಳ ಹಿಂದೆ ಬ್ರಹ್ಮ ಚೈತನ್ಯ ಮಹಾರಾಜರು ಈ ಜಾಗದಲ್ಲಿ ಶ್ರೀರಾಮ ಹಾಗೂ ಲಕ್ಷ್ಮಣ ವಾಸ್ತವ್ಯ ಮಾಡಿದ್ದ ಸ್ಥಳದಲ್ಲಿ ಜೈಪುರನಿಂದ ಅಮೃತ ಶಿಲೆಯಿಂದ ಕೆತ್ತನೆ ಮಾಡಿರುವ ರಾಮ, ಲಕ್ಷ್ಮಣ, ಸೀತಾದೇವಿ ಹಾಗೂ ಹನುಮಾನ್ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಿದ್ದಾರೆ. ಮೂರ್ತಿಗಳನ್ನು ಸುಂದರವಾಗಿ ಕೆತ್ತನೆ ಮಾಡಿರುವುದರಿಂದ ಸಜೀವ ಶ್ರೀರಾಮನ ಮಂದಿರವೆಂಬ ಮಾತಿದೆ.
ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾಮಾತೆಯು ಗರ್ಭಗುಡಿಯಲ್ಲಿ ನೆಲೆ ನಿಂತಿದ್ದಾರೆ. ಮುಂದೆ ಹನುಮಾನ್ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ರಾಮನ ಪಾದಸ್ಪರ್ಶದಿಂದಾಗಿ ರಾಮಮಂದಿರ ನಿರ್ಮಾಣವಾಗಿದೆಯೆಂದು ಇತಿಹಾಸದ ಮೂಲದ ವಿವರಣೆ. ಈಗ ಇದೊಂದು ಪವಿತ್ರ ಕ್ಷೇತ್ರವೆನಿಸಿದೆ. ಈಗಿನ ಬೆಳದಡಿ ಗ್ರಾಮದಿಂದ ಶ್ರೀರಾಮ ಬೈರಾಪುರ ಗ್ರಾಮಕ್ಕೆ ಹೋಗುವಾಗ ರಾಮನ ತಂದೆ ದಶರಥ ಮಹಾರಾಜರು ಸಾವನ್ನಪ್ಪಿರುವ ಸುದ್ದಿ ತಿಳಿದು, ಬೈರಾಪುರದಲ್ಲಿ ಬಿಲ್ಲು ಹೊಡೆದು ನೀರು ತರಿಸಿದ್ದನೆಂಬ ಪ್ರತೀತಿಯಿದೆ. ಶ್ರೀರಾಮ ಮತ್ತು ಲಕ್ಷ್ಮಣರು ಮುಂದೆ ಅಲ್ಲಿಂದ ಕಿಷ್ಕಿಂದೆ ಹೋಗಿದ್ದಾರೆ. ದೇವಾಲಯಕ್ಕೆ ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದಲ್ಲಿ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ನಿತ್ಯ ದೇವಸ್ಥಾನದಲ್ಲಿ ರಾಮರಕ್ಷಾ ಸ್ತೋತ್ರ, ಕಾಕಡಾರತಿ, ನೈವೇದ್ಯ, ವಿಷ್ಣು ಸಹಸ್ರನಾಮ, ಶೇಜಾರತಿ ಸೇರಿದಂತೆ ವಿವಿಧ ಪೂಜಾ-ಕೈಂಕರ್ಯಗಳು ಜರುಗುತ್ತಿದ್ದು ಭಕ್ತರ ಪಾಲಿನ ಪುಣ್ಯಕ್ಷೇತ್ರವಾಗಿದೆ. ರಾಮನ ಪಾದಸ್ಪರ್ಶವಾದ ಜಾಗದಲ್ಲಿ ರಾಮನ ಭವ್ಯ ಮಂದಿರವನ್ನು ನಿರ್ಮಾಣ ಮಾಡಿಕೊಂಡು ಇಲ್ಲಿ ಆರಾಧನೆ ಮಾಡಲಾಗುತ್ತಿದೆ.