ಬೆಂಗಳೂರು: ಬೆಳೆನಷ್ಟದ ಕುರಿತು ಮರುಸಮೀಕ್ಷೆ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ, ಬರ ಪರಸ್ಥಿತಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು “ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದ್ದು, ಈ ನಿಟ್ಟಿನಲ್ಲಿ ಪೂರ್ಣ ತಯಾರಿ ನಡೆಸಿದೆ. ಕಳೆದ 2 ತಿಂಗಳಿಂದ 4 ಬಾರಿ ಬರ ಪರಸ್ಥಿತಿ ಕುರಿತು ಸಂಪುಟ ಉಸಮಿತಿ ಸಭೆ ನಡೆಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ.
ರಾಜ್ಯದಲ್ಲಿ ಈವರೆಗೂ ಒಟ್ಟಾರೆ ವಾಡಿಕೆಗಿಂತ ಶೇ 26% ಕಡಿಮೆ ಮಳೆಯಾಗಿದೆ. ಆದ್ದರಿಂದಾಗಿ ಬರದ ವಾತಾವರಣ ದಟ್ಟವಾಗಿದ್ದು, ಈವರೆಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ 62 ತಾಲೂಕುಗಳು ತೀವ್ರ ಬರಪೀಡತ ಎಂದು ಘೋಷಿಸಲು ಅರ್ಹವಾಗಿವೆ. ಆದರೆ ಇನ್ನೂ ಹೆಚ್ಚಿನ ತಾಲೂಕುಗಳು ಬರ ಎದುರಿಸುತ್ತಿರುವರಿಂದ, 137 ತಾಲೂಕುಗಳಲ್ಲಿ ಬೆಳೆನಷ್ಟದ ಕುರಿತು ಮರುಸಮೀಕ್ಷೆ ನಡೆಸಲು ಸಂಪುಟ ಉಪಸಮಿತಿ ತೀರ್ಮಾನಿಸಿದ್ದು, ಗರಿಷ್ಠ 1 ವಾರದ ಒಳಗೆ ಸಮೀಕ್ಷೆ ವರದಿ ಸಲ್ಲಿಕೆಯಾಗಲಿದೆ.
ಈ ಹಿನ್ನಲೆಯಲ್ಲಿ ಬರಪೀಡಿತ ತಾಲೂಕುಗಳಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪ್ರತಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಮಾನವ ದಿನಗಳ ಸಂಖ್ಯೆಯನ್ನು 100 ದಿನಗಳಿಂದ 150 ದಿನಗಳಿಗೆ ಏರಿಸಲು ಶಿಫಾರಸ್ಸು ಮಾಡಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ 37 ತಾಲೂಕುಗಳಲ್ಲಿ ಮಾತ್ರ ಎದುರಾಗಿದ್ದು, ರಾಜ್ಯದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನೂ ಸರ್ಕಾರ ವಹಿಸಿದೆ. ಮುಂದಿನ ದಿನಗಳಲ್ಲೂ ಸಮಸ್ಯೆ ಎದುರಾಗದಂತೆ ತಡೆಯಲು ಕಂಟಿಂಜೆನ್ಸಿ ಪ್ಲಾನ್ ತಯಾರಿಸಲು ಎಲ್ಲಾ ಜಿಲ್ಲಾ ಸಿಇಒಗಳಿಗೆ ಸೂಚಿಸಲಾಗಿದೆ. ಅಲ್ಲದೇ ಎಲ್ಲಾ ಜಿಲ್ಲಾ ಸಿಇಒಗಳ ಬಳಿ ಕುಡಿಯುವ ನೀರಿಗಾಗಿಯೇ ತಲಾ ಒಂದು ಕೋಟಿ ಹಣ ಈಗಾಗಲೇ ಒದಗಿಸಲಾಗಿದೆ” ಎಂದಿದ್ದಾರೆ.