ಬೇಟೆಗಾರ ಬಲಿ ಗಂಭೀರ ವಿಚಾರ; ಸಂಯಮ ಇರಲಿ

Advertisement

ಕಾಡುಗಳ್ಳರನ್ನು ನಿಗ್ರಹಿಸಬೇಕು, ನಿಜ. ಆದರೆ ಅರಣ್ಯಾಧಿಕಾರಿಗಳಿಗೆ ಇರುವ ಅಪರಿಮಿತ ಅಧಿಕಾರದ ದುರ್ಬಳಕೆ ಆಗಬಾರದು

ಚಾಮರಾಜನಗರ ಅರಣ್ಯದಲ್ಲಿ ಸಣ್ಣಪುಟ್ಟ ಕಾಡುಪ್ರಾಣಿಗಳನ್ನು ಬೇಟೆಯಾಡುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಕೆಲವು ಸಂದರ್ಭಗಳಲ್ಲಿ ಬೇಟೆಯಾಡುವವರು ಅರಣ್ಯ ಸಿಬ್ಬಂದಿಗೆ ಸಿಕ್ಕಿಬೀಳುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಪರಾರಿಯಾಗಿಬಿಡುತ್ತಾರೆ. ಆದರೆ, ಎರಡು ದಿನಗಳ ಹಿಂದೆ ನಡೆದ ಘಟನೆ ಗಂಭೀರವಾಗಿದೆ. ಸಿಕ್ಕಿ ಬೀಳುವ ಭಯದಲ್ಲಿ ಬೇಟೆಗಾರರು ಅರಣ್ಯಸಿಬ್ಬಂದಿ ಮೇಲೆದಾಳಿ ನಡೆಸಲು ಹೋಗಿ ಒಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ವೀರಪ್ಪನ್ ಹತ್ಯಯಾದ ಮೇಲೆ ಕಾಡು ಬಹುತೇಕ ಶಾಂತವಾಗಿತ್ತು. ಕಾಡುಗಳ್ಳರ ದೊಡ್ಡ ಗ್ಯಾಂಗ್ ಇರಲಿಲ್ಲ. ಆನೆ, ಹುಲಿ ಮತ್ತಿತರ ದೊಡ್ಡ ಜೀವಿಗಳಿಗೆ ಪ್ರಾಣದ ಬೆದರಿಕೆ ಇಲ್ಲದ ಕಾರಣ ಅವುಗಳ ಸಂತತಿ ಅಧಿಕಗೊಂಡಿದೆ. ಅರಣ್ಯದ ಸುತ್ತ ಇರುವ ಗ್ರಾಮಗಳಲ್ಲಿ ಕೆಲವರು ಗುಂಪುಗೂಡಿಕೊಂಡು ರಾತ್ರಿ ವೇಳೆ ಜಿಂಕೆ, ಕಡವೆ, ಕಾಡುಹಂದಿಯನ್ನು ಬೇಟೆಯಾಡಲು ಹೋಗುತ್ತಾರೆ. ಅವುಗಳ ಮಾಂಸ ಮಾರುವುದು ರೂಢಿ. ಹಳ್ಳಿಗಳಲ್ಲಿ ಕೆಲವು ಮನೆಗಳು ಕಾಡುಮೃಗಗಳ ಮಾಂಸ ಮಾರಾಟ ಮಾಡುತ್ತಿರುವುದು ಸ್ಥಳೀಯರಿಗೆ ತಿಳಿದಿದೆ. ಇದನ್ನು ನಿಲ್ಲಿಸಬೇಕು ಎಂದು ಅರಣ್ಯ ಇಲಾಖೆ ಕ್ರಮಕೈಗೊಳ್ಳುತ್ತಿದ್ದರೂ ಸಂಪೂರ್ಣ ನಿಲ್ಲಿಸಲು ಸಾಧ್ಯವಾಗಿಲ್ಲ. ಇದಕ್ಕೆ ಸ್ಥಳೀಯ ಪೊಲೀಸರ ನೆರವು ಅಗತ್ಯ. ಮಹದೇಶ್ವರ ಬೆಟ್ಟ ಅರಣ್ಯದಲ್ಲಿ ತಮಿಳುನಾಡಿನಿಂದ ಬಂದು ಬೇಟೆಯಾಡಿ ಹೋಗುವ ಗುಂಪುಗಳು ಇವೆ. ಅವುಗಳನ್ನು ಮಟ್ಟ ಹಾಕುವ ಅಗತ್ಯವಿದೆ. ಹಿಂದೆ ಅರಣ್ಯದ ಸುತ್ತ ಸರಹದ್ದಿನಲ್ಲಿ ಬುಡಕಟ್ಟಿನವರು ಇದ್ದರು. ಈಗ ಅವರ ಸಂಖ್ಯೆ ಕಡಿಮೆಯಾಗಿ ಬೇರೆಯವರು ವಾಸವಿದ್ದಾರೆ. ಹೀಗಾಗಿ ಕಾಡಿನೊಳಗೆ ಅಕ್ರಮ ಪ್ರವೇಶ ಮಾಡುವುದು ಪ್ರಾಣಿಗಳನ್ನು ಬೇಟೆಯಾಡುವುದು ಆಗಾಗ್ಗೆ ನಡೆಯುತ್ತಿದೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಅರಣ್ಯದಲ್ಲಿ ಗಸ್ತು ತಿರುಗುವ ಸಿಬ್ಬಂದಿಗೆ ಸಿಕ್ಕಿಬೀಳುವವರು ಬಹಳ ಕಡಿಮೆ. ಅವರು ಸಾಮಾನ್ಯವಾಗಿ ಅರಣ್ಯಾಧಿಕಾರಿಗಳನ್ನು ನೋಡಿದರೆ ಓಡಿಹೋಗುತ್ತಾರೆ. ಕೆಲವರು ಮಾತ್ರ ದಾಳಿ ನಡೆಸಲು ಮುಂದಾಗುತ್ತಾರೆ. ಅವರ ಬಳಿ ಸಿಂಗಲ್ ಬ್ಯಾರಲ್ ಬಂದೂಕು ಬಿಟ್ಟರೆ ಬೇರೆ ಅತ್ಯಾಧುನಿಕ ಶಸ್ತ್ರಾಸ್ತ್ರ ಇರುವುದಿಲ್ಲ. ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡುವುದೇ ಅಪರಾಧ. ಅದರೊಂದಿಗೆ ವನ್ಯಜೀವಿಗಳನ್ನು ಬೇಟೆಯಾಡುವುದು ಜಾಮೀನು ರಹಿತ ಅಪರಾಧ. ಹಿಂದೆ ಇದೇ ಚಾಮರಾಜನಗರದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಕಾಡಿನಲ್ಲಿ ಬೇಟೆಯಾಡಲು ಹೋಗಿ ಬಂಧನಕ್ಕೆ ಒಳಗಾಗಿದ್ದರು. ಆಗ ಅದು ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿತ್ತು.
ಕೇರಳ, ತಮಿಳುನಾಡು ಮತ್ತು ಕರ್ನಾಟಕ ಅರಣ್ಯ ಪ್ರದೇಶ ಸೇರುವ ಜಾಗದಲ್ಲಿರುವುದರೀಮದ ವನ್ಯಜೀವಿಗಳ ಸಂಚಾರ ಅಧಿಕವಾಗುತ್ತದೆ. ಹೀಗಾಗಿ ಇಲ್ಲಿಯ ಸುತ್ತಮುತ್ತಲ ಹಳ್ಳಿಯ ಕೆಲವರು ಪ್ರಾಣಿಗಳ ಬೇಟೆಯನ್ನೇ ತಮ್ಮ ಕಸುಬಾಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಅಂತ್ಯ ಹಾಡುವುದು ಅಗತ್ಯ. ಅರಣ್ಯ ಇಲಾಖೆ ಈ ಪ್ರದೇಶಕ್ಕೆ ಹೊಸ ಕಾರ್ಯಪಡೆಯನ್ನು ನೇಮಿಸಿ ನಿಯಂತ್ರಣಕ್ಕೆ ತರಬೇಕು. ವೀರಪ್ಪನ್ ಹೋದ ಮೇಲೆ ಬೇರೆ ಕಾಡುಗಳ್ಳರ ತಂಡ ತಲೆಎತ್ತದಂತೆ ಎಚ್ಚರವಹಿಸುವುದು ಅಗತ್ಯ. ಅರಣ್ಯ ಕಾಯ್ದೆ ಪ್ರಬಲವಾಗಿದೆ. ಅರಣ್ಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಲ್ಲಿ ಅಭಯಾರಣ್ಯಗಳು ಮುಂದಿನ ದಿನಗಳಲ್ಲಿ ನಿಜವಾಗಿಯೂ ಉತ್ತಮ ತಾಣವಾಗಲಿದೆ. ನಿಸರ್ಗದ ಕೊಡುಗೆಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ವನ್ಯಜೀವಿಗಳು ಇರಬೇಕೆಂದರೆ ಅದಕ್ಕೆ ಬೇಕಾದ ವಾತಾವರಣ ಕಲ್ಪಿಸುವುದು ಎಲ್ಲರ ಕರ್ತವ್ಯ. ಅರಣ್ಯ ಸಂರಕ್ಷಣೆಗೆ ಮೊದಲಿನಿಂದಲೂ ಉತ್ತಮ ಪದ್ಧತಿ ಅನುಸರಿಸಿಕೊಂಡು ಬರಲಾಗಿದೆ. ನಗರಗಳು ಹೇಗೆ ಪ್ರಮುಖವೋ ಅದೇರೀತಿ ಅರಣ್ಯವೂ ಅಮೂಲ್ಯ ಎಂಬುದನ್ನು ಮರೆಯುವಂತಿಲ್ಲ.
ಬಂಡೀಪುರ ಮತ್ತು ನಾಗರಹೊಳೆ ನಿಸರ್ಗದತ್ತ ಕೊಡುಗೆ. ಅದನ್ನು ಕಾಪಾಡುವುದು ಸರ್ಕಾರದ ಕರ್ತವ್ಯ. ವನ್ಯಜೀವಿಗಳು ನಿರಾತಂಕವಾಗಿ ಬದುಕಬೇಕು ಎಂದರೆ ಅಕ್ರಮ ಬೇಟೆಗೆ ಅವಕಾಶ ಇಲ್ಲದಂತೆ ಮಾಡಬೇಕು. ಈಗಲೂ ಹಣವಂತರು ಕಾಡುಪ್ರಾಣಿಗಳ ಬೇಟೆಯನ್ನು ಪ್ರತಿಷ್ಠೆ ಎಂದು ತಿಳಿಯುತ್ತಾರೆ. ಅದಕ್ಕಾಗಿ ಹಣ ವೆಚ್ಚಮಾಡಲು ಸಿದ್ಧ ಎನ್ನುತ್ತಾರೆ. ಇಂಥವರಿಗೆ ಕಾನೂನಿನ ರುಚಿ ತೋರಿಸುವುದು ಅಗತ್ಯ. ಈ ವಿಷಯದಲ್ಲಿ ಅರಣ್ಯ ಅಧಿಕಾರಿಗಳು ಕಟ್ಟುನಿಟ್ಟಾಗಿ ವರ್ತಿಸುವುದು ಅಗತ್ಯ. ಕಾಡಿನ ಅಂಚಿನಲ್ಲಿರುವ ಜನ ಕಾನೂನು ಉಲ್ಲಂಘಿಸಿದ್ದಾಗ ಅವರ ಮೇಲೆ ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಲ್ಲಿ ಅಕ್ರಮ ಬೇಟೆಯನ್ನು ತಡೆಗಟ್ಟಬಹುದು. ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಸಮನ್ವಯ ಅಗತ್ಯ.
ವೀರಪ್ಪನ್ ಹತ್ಯೆಯಾದ ಮೇಲೆ ಅರಣ್ಯ ಶಾಂತವಾಗಿತ್ತು. ಈಗ ಚಾಮರಾಜನಗರ ಅರಣ್ಯದಲ್ಲಿ ಕಾಡುಪ್ರಾಣಿಯ ಬೇಟೆಯಾಡಲು ಬಂದ ವ್ಯಕ್ತಿ ಅರಣ್ಯ ಸಿಬ್ಬಂದಿಯ ಗುಂಡಿಗೆ ಬಲಿಯಾಗಿದ್ದಾನೆ. ಇದು ಎಚ್ಚರಿಕೆಯ ಗಂಟೆ. ಅರಣ್ಯ ಪ್ರದೇಶಕ್ಕೆ ಯಾರೂ ನುಸುಳದಂತೆ ಕ್ರಮಕೈಗೊಳ್ಳಬೇಕು.