ಬೇರೆಯವರು ಕಲ್ಯಾಣಪರ್ವ ನಡೆಸಿದರೆ ಕಾನೂನು ಕ್ರಮ: ಮಾತೆ ಗಂಗಾದೇವಿ

ಮಾತೆ ಗಂಗಾದೇವಿ
Advertisement

ಕೂಡಲಸಂಗಮ: ಉಚ್ಚಾಟಿತ ಚನ್ನಬಸವಾನಂದ ಸ್ವಾಮೀಜಿ, ಅವರ ಹಿಂಬಾಲಕರು ೨೧ನೇ ಕಲ್ಯಾಣ ಪರ್ವಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಪ್ರತ್ಯೇಕ ಕಲ್ಯಾಣ ಪರ್ವ ಮಾಡುತ್ತೇವೆ ಎಂದು ಘೋಷಿಸಿದ್ದು ಬಸವಧರ್ಮ ಪೀಠಕ್ಕೆ ಸಂಬಂಧ ಇಲ್ಲದ ಇವರಿಗೆ ಕಲ್ಯಾಣ ಪರ್ವ ನಡೆಸುವ ಹಕ್ಕು ಇಲ್ಲ ಎಂದು ಕೂಡಲಸಂಗಮ ಬಸವ ಧರ್ಮಪೀಠದ ಪೀಠಾಧ್ಯೆಕ್ಷೆ ಮಾತೆ ಗಂಗಾದೇವಿ ಕಿಡಿಕಾರಿದರು.
ಅವರು ನೀಡಿರುವ ಪ್ರಕಟಣೆಯಲ್ಲಿ, ಬಸವ ಧರ್ಮಪೀಠ ಹಾಗೂ ಅಧೀನ ಸಂಸ್ಥೆಗಳಿಂದ ಆಗಲೇ ಚನ್ನಬಸವಾನಂದ ಸ್ವಾಮಿಜಿಯನ್ನು ಉಚ್ಚಾಟಿಸಲಾಗಿದೆ. ನಮ್ಮ ಅನುಮತಿ ಇಲ್ಲದೇ ಬಸವ ಧರ್ಮ ಪೀಠದ ಹೆಸರು ಬಳಸಿಕೊಂಡು ಕಲ್ಯಾಣ ಪರ್ವಕ್ಕೆ ತೊಂದರೆ ಕೊಟ್ಟರೆ ಟ್ರಸ್ಟನಿಂದ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.
ಬೀದರ ಜಿಲ್ಲೆ ಬಸವ ಕಲ್ಯಾಣದಲ್ಲಿ ಕೂಡಲಸಂಗಮ ಬಸವ ಧರ್ಮಪೀಠದಿಂದ ಅಕ್ಟೋಬರ್ 8 ರಿಂದ 10ರ ವರೆಗೆ 21ನೇ ಕಲ್ಯಾಣ ಪರ್ವ ಕಾರ್ಯಕ್ರಮ ಹಮ್ಮಿಕೊಂಡಿದೆ. ಭಕ್ತರು ಗೊಂದಲಗಳಿಗೆ ಒಳಗಾಗದೇ ಬಸವ ಧರ್ಮ ಪೀಠದಿಂದ ಕಳೆದ 20 ವರ್ಷದಿಂದ ನಡೆಸಿಕೊಂಡು ಬಂದ ಕಲ್ಯಾಣ ಪರ್ವಕ್ಕೆ ಆಗಮಿಸಬೇಕು ಎಂದು ತಿಳಿಸಿದ್ದಾರೆ.
ಈ ಹಿಂದಿನಂತೆಯೇ ಬಸವಧರ್ಮ ಪೀಠದವತಿಯಿಂದ ನಡೆಸಲ್ಪಡುವ ಎಲ್ಲಾ ಉತ್ಸವಗಳ ಅಧಿಕೃತ ಅಧ್ಯಕ್ಷಳಾಗಿ ಅಕ್ಟೋಬರ್ 8 ರಿಂದ 10ರ ವರೆಗೆ ಮೂರು ದಿನಗಳ ಕಾಲ 21ನೇ ಕಲ್ಯಾಣ ಪರ್ವ ಉತ್ಸವ ನನ್ನ ನೇತೃತ್ವದಲ್ಲಿಯೇ ನಡೆಯುತ್ತದೆ. ಬಸವ ಧರ್ಮಪೀಠದಿಂದ ಕೂಡಲಸಂಗಮದಲ್ಲಿ ಶರಣಮೇಳ, ಬಸವಕಲ್ಯಾಣದಲ್ಲಿ ಕಲ್ಯಾಣಪರ್ವ ಕಾರ್ಯಕ್ರಮ ಹಮ್ಮಿಕೊಂಡು ಬಸವಾದಿ ಶರಣರ ಸಂದೇಶವನ್ನು ನಾಡಿಗೆ ಪರಿಚಯಿಸುತ್ತಿದೆ. 1988ರಲ್ಲಿ ಕೂಡಲಸಂಗಮದಲ್ಲಿ ಬಸವಧರ್ಮ ಪೀಠದ ಪ್ರಥಮ ಪೀಠಾಧ್ಯೆಕ್ಷ ಲಿಂಗಾನಂದ ಸ್ವಾಮೀಜಿ, ದ್ವೀತಿಯ ಪೀಠಾಧ್ಯಕ್ಷೆ ಮಾತೆ ಮಹಾದೇವಿ ನೇತೃತ್ವದಲ್ಲಿ ಶರಣಮೇಳ ಆರಂಭಗೊಂಡಿತು. 2002ರಲ್ಲಿ ಮಾತೆಮಹಾದೇವಿ ಬಸವಕಲ್ಯಾಣದಲ್ಲಿ ಕಲ್ಯಾಣಪರ್ವ ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆದುಕೊಂಡು ಬಂದಿದೆ.
ಬಸವಧರ್ಮ ಪೀಠದ ಮೂರನೇ ಪೀಠಾಧ್ಯಕ್ಷೆ ನಾನಾಗಿದ್ದು, ಬಸವ ಧರ್ಮಪೀಠ ಟ್ರಸ್ಟ್‌ನ ಬಸವ ಕಲ್ಯಾಣ ಶಾಖೆಯಲ್ಲಿ ಪ್ರತಿವರ್ಷ ನಡೆಯುವ ಕಲ್ಯಾಣಪರ್ವ ಉತ್ಸವ ಸಮಿತಿಯ ನೋಂದಾಯಿತ ಖಾಯಂ ಅಧ್ಯಕ್ಷರಾಗಿ ಹಿಂದೆ ಮಾತೆ ಮಹಾದೇವಿಯವರಿದ್ದರು. ಅವರ ಲಿಂಗೈಕ್ಯ ನಂತರ ಆ ಸ್ಥಾನದಲ್ಲಿ ನಾನಿದ್ದೇನೆ. ಹಾಗೇನಾದರೂ ಪ್ರತ್ಯೇಕವಾಗಿ ಕಲ್ಯಾಣ ಪರ್ವ ನಡೆಸಿದರೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.