ಬ್ರ್ಯಾಂಡ್ ಮಂಗಳೂರಿಗೆ ಮಸಿ ಬಳಿಯಬೇಡಿ

Advertisement

ಮಂಗಳೂರು: ಯಾವುದೇ ರಾಜಕೀಯ ಪಕ್ಷಗಳ ವಿಜಯೋತ್ಸವ ಮೆರವಣಿಗೆ ಧಾರ್ಮಿಕ ಕೇಂದ್ರಗಳ ಎದುರು ಹಾದುಹೋಗಬಾರದು. ಇದರಿಂದ ಪ್ರಚೋದನಕಾರಿ ಘೋಷಣೆ ಕೂಗುವುದು ಸೇರಿದಂತೆ ಅಶಾಂತಿಯ ವಾತಾವರಣವನ್ನು ತಪ್ಪಿಸಲು ಸಾಧ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅ‍ವರು, ಮಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಹಾಗೂ ಪ್ರವಾಸಿ ಕೇಂದ್ರಗಳಿವೆ. ದೇಶ, ವಿದೇಶದಿಂದ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಮಂಗಳೂರಿಗೆ ತನ್ನದೇ ಆದ ಬ್ರ್ಯಾಂಡ್‌ ಇದ್ದು, ಅದಕ್ಕೆ ಮಸಿ ಬಳಿಯಲು ಯಾರೂ ಅವಕಾಶ ನೀಡಬಾರದು. ಎಲ್ಲಿಯೂ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಬೋಳಿಯಾರ್‌ ಮಾದರಿಯ ಘಟನೆ ಮರುಕಳಿಸಬಾರದು ಎಂಬ ಕಾರಣಕ್ಕೆ ಶೀಘ್ರವೇ ಶಾಂತಿ ಸಮಿತಿ ಸಭೆ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ವಿನಂತಿಸಲಾಗಿದೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಂಧಿಸಿದರೆ ಕಾಂಗ್ರೆಸ್‌ ನಿರ್ನಾಮವಾಗುತ್ತದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ ಬಿಎಸ್‌ವೈ ವಿರುದ್ಧ ಕಾಂಗ್ರೆಸ್‌ ದೂರು ನೀಡಿಲ್ಲ. ಕೋರ್ಟ್ ಸೂಚನೆ ಮೇರೆಗೆ ಅವರ ಮೇಲೆ ಕೇಸು ದಾಖಲಾಗಿದೆ. ಅದರಲ್ಲಿ ಕಾಂಗ್ರೆಸ್‌ ಪಾತ್ರ ಏನೂ ಇಲ್ಲದಿದ್ದರೂ ವಿನಾ ಕಾರಣ ಆರೋಪ ಮಾಡಲಾಗುತ್ತಿದೆ ಎಂದರು.
ಬಿಜೆಪಿಗರು ಅಭಿವೃದ್ಧಿ ಬಗ್ಗೆ ಯೋಚಿಸಲಿ:
ಎಐಸಿಸಿ ಕಾರ್ಯದರ್ಶಿ ಪದ್ಮರಾಜ್‌ ಮಾತನಾಡಿ, ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ಪ್ರಚೋದನಕಾರಿಯಾಗಿ ಮಾತನಾಡದೆ ಅಭಿವೃದ್ಧಿ ಬಗ್ಗೆ ಯೋಚಿಸಬೇಕು. ಬೋಳಿಯಾರ್‌ನಂಥ ಘಟನೆ ನಡೆದಾಗ ರಾಜ್ಯ ನಾಯಕರು ಇಲ್ಲಿಗೆ ಬಂದು ಏನು ಮಾಡುವುದಕ್ಕಿದೆ? ಬೋಳಿಯಾರ್‌ ಘಟನೆಯಲ್ಲಿ ಗಾಯಗೊಂಡವರ ಕುಟುಂಬಕ್ಕೆ ಸಮಾಧಾನ ಯಾರು ಹೇಳಬೇಕು. ಅವರ ಕಷ್ಟ ಪರಿಹರಿಸುವವರು ಯಾರು? ಯುವಕರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದರು.
ಮಸೀದಿಗೆ ಬಂದು ಪರಿಶೀಲಿಸಲು ಸವಾಲು:
ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಾಹುಲ್‌ ಹಮೀದ್‌ ಮಾತನಾಡಿ, ಬೆಳ್ತಂಗಡಿ ಶಾಸಕರು ಪ್ರಚೋದನಕಾರಿಯಾಗಿ ಮಾತನಾಡುತ್ತಿದ್ದಾರೆ. ಬೋಳಿಯಾರ್ ಘಟನೆ ವಿಚಾರದಲ್ಲಿ ಸ್ಪೀಕರ್‌ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ. ಶಾಸಕರು ನಿರಂತರವಾಗಿ ಸಮಾಜವನ್ನು ಒಡೆಯುವ, ಕೋಮು ದ್ವೇಷದ ಮಾತನ್ನು ಆಡುತ್ತಿದ್ದಾರೆ. ಮಸೀದಿಯಲ್ಲಿ ಶಸ್ತ್ರ ಇದೆ ಎನ್ನುವ ಅವರು ಮಸೀದಿಗೆ ಬಂದು ಪರಿಶೀಲಿಸಲಿ ಎಂದು ಸವಾಲು ಹಾಕಿದರು.