ಭಗವಂತನ ನಾಮ ಶ್ರವಣ ಮಾಡುವ ಶ್ರಾವಣ

Advertisement

ಅನೇಕತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಭವ್ಯ ಭಾರತದಲ್ಲಿ ವರ್ಷವಿಡೀ ಹಲವಾರು ಹಬ್ಬ ಹರಿದಿನಗಳನ್ನು ನಾವು ಆಚರಿಸುತ್ತಲೇ ಬಂದಿದ್ದೇವೆ. ನಮ್ಮ ಹಬ್ಬಗಳು ಪವಿತ್ರ ಸಂಸ್ಕರದ ಮಾರ್ಗದರ್ಶನದೊಂದಿಗೆ ಭಗವಂತನ ಸಾಕ್ಷಾತ್ಕಾರದ ಕಡೆಗೆ ನಮಗೆ ಪ್ರೇರಣೆ ನೀಡುತ್ತವೆ. ನಮ್ಮ ನಾಡು ಸೂಪಿ, ಸಂತರು, ಶರಣರು, ಸತ್ಪುರುಷರು ಇದೇ ಪವಿತ್ರಭೂಮಿಗೆ ಬಂದು ಮಾನವೀಯ ಮೌಲ್ಯದ ತಾತ್ಪರ್ಯದ ಬೋಧನೆಯನ್ನು ಇಡೀ ಜೀವನದುದ್ದಕ್ಕೂ ಮನುಷ್ಯನಿಗೆ ನೀಡುತ್ತಲೇ ಬಂದಿದ್ದಾರೆ.
ಆ ಶರಣ, ಸತ್ಪುರುಷರು, ಪರಮಾತ್ಮನ ನಿಜ ಸ್ವರೂಪವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದರೆ, ನಮ್ಮ ಶರೀರದ ಇಂದ್ರಿಯಗಳನ್ನು ನಿಯಂತ್ರಿಸಿಕೊಳ್ಳುವದು ಅಗತ್ಯ. ಹಾಗೇ ಕರಣಗಳ ನಿಗ್ರಹವೇ ತಪ ಎನಿಸಿಕೊಳ್ಳುವದು. ಶಿವನ ಧ್ಯಾನದ ಪರಿ ಅರಿಯಬೇಕೆಂದರೆ ಗುರು ಮಾರ್ಗದರ್ಶನ ಬೇಕೇ ಬೇಕು. ಆ ಭಗವಂತ ನಮಗೆಲ್ಲವನ್ನು ಕೊಟ್ಟು ಕಾಪಾಡಿದ್ದಾನೆ. ಆದರೆ ನಾವು ಅವನ್ನು ಒಂದು ದಿನವೂ ಆತನನ್ನು ಕೊಂಡಾಡುವದಿಲ್ಲ. ಬಸವಣ್ಣನವರು, ಹೇಳಿದಂತೆ ಕೂಡಲಸಂಗನ ವರಿಸಲು ಬಂದ ಈ `ಪ್ರಸಾದ ಕಾಯವ ಕೆಡದಂತೆ ನೋಡಯ್ಯ…’ ಎಂದಿದ್ದಾರೆ. ಅದಕ್ಕಾಗಿ ನಮ್ಮ ಸಂಸ್ಕಾರದ ಜಂಜಾಟದಲ್ಲಿ ಮಗ್ನರಾಗಿ ಪರಮಾತ್ಮನ ಧ್ಯಾನ ಪೂಜೆ ಎಲ್ಲ ಮರೆತು ಬಿಟ್ಟಿದ್ದೇವೆ. ವರ್ಷವಿಡೀ ಮಾಡದೇ ಇದ್ದರೂ ಕೂಡ ಶ್ರಾವಣ ಪವಿತ್ರ ಮಾಸದಲ್ಲಿ ದೇವರ ಕುರಿತಂತೆ ಕೇಳಬೇಕು. ಆತನ ಸಂಕೀರ್ತನೆಗಳನ್ನು ಮನನ ಮಾಡಬೇಕು. ಸದ್ಗುರುಗಳ ಮಾರ್ಗದರ್ಶನದಲ್ಲಿ ಉಪವಾಸ, ಭಜನೆ, ಧ್ಯಾನ ಮಾಡಿ ನಮ್ಮ ಆತ್ಮವನ್ನು ಪರಮಾತ್ಮನ ನೆನೆಹುವಿನ ಕಡೆ ವಾಲಿಸಿ ಜೀವನ ಸಾರ್ಥಕಗೊಳಿಸಬೇಕಿದೆ. ಈ ಮಾಸದಲ್ಲಿ ಮಾಂಸಾಹಾರಗಳಿಂದ ಮತ್ತು ಮದ್ಯಸೇವನೆಯಿಂದ ದೂರವೇ ಇರುತ್ತಾರೆ. ಮುಸ್ಲಿಂರು ಕೂಡ ರಮಜಾನ್ ಬಂತೆಂದರೆ, ಮಸೀದಿಗಳಲ್ಲಿ ಪ್ರಾರ್ಥನೆ ತಪ್ಪದೇ ಮಾಡುತ್ತಾರೆ. ಸಾತ್ವಿಕರಾಗುತ್ತಾರೆ. ಇದೇ ತರಹದ ಜೀವನ ಶೈಲಿಯನ್ನು ನಾವು ಮಾಡಿಕೊಂಡಿದ್ದೇ ಆದಲ್ಲಿ ದೇವರನ್ನು ಕಾಣುವದು ಅಂದರೆ ಉತ್ತಮೋತ್ತಮ ಜೀವನವನ್ನು ನಡೆಸಲು ಶಕ್ಯರಾಗುತ್ತೇವೆ. ನಮ್ಮ ನಡೆ ಜೀವನುದ್ದಕ್ಕೂ ಭಗವಂತ ಮೆಚ್ಚುವಂತಿರಬೇಕು. ಹಿರಿಯರಲ್ಲಿ ಭಯಭಕ್ತಿ ಇಟ್ಟು ನಡೆಯಬೇಕು. ಜ್ಞಾನವಂತರಾಗಿ ಬದುಕಬೇಕು. ಇದು ಪವಿತ್ರ ತಿಂಗಳಲ್ಲಿ ಮಾತ್ರ ನಡೆಯುವಂತಾಗದೇ ಇಡೀ ಜೀವನದಲ್ಲೇ ನಡೆಯುವಂತಾಗಬೇಕು.