ಭಗವಂತನ ಪ್ರೇರಣೆಯಿಂದಲೇ ಸನ್ಮಾರ್ಗ ಪ್ರಾಪ್ತಿ

PRATHAPPHOTOS.COM
Advertisement

ಜೀವನದ ಪ್ರತಿಯೊಂದು ಹಂತದಲ್ಲಿಯೂ ನಮಗೆ ಭಗವಂತನ ಅನುಗ್ರಹ ಅತ್ಯಂತ ಅನಿವಾರ್ಯ. ಮಾನಸಿಕ ಆಲೋಚನೆ ಇರಬಹುದು ಅಥವಾ ವಾಚನಿಕವಾದ ವ್ಯವಹಾರ ಇರಬಹುದು. ದೈಹಿಕವಾದ ಯಾವುದೇ ಪ್ರವೃತ್ತಿ ಆಗಿರಬಹುದು ಭಗವಂತನ ಅನುಗ್ರಹದ ಪ್ರೇರಣೆಯ ಸಹಾಯವಿಲ್ಲದಂತೆ ರಮಾ ಬ್ರಹ್ಮಾದಿ ದೇವತೆಗಳಿಗೂ ಏನೂ ಮಾಡಲು ಸಾಧ್ಯವಿಲ್ಲ ಅಂದ ಮೇಲೆ ಸಾಮಾನ್ಯ ಮಾನವರ ಪಾಡೇನು?
ಅನಾದಿಕಾಲದಿಂದ ಅನಂತಕಾಲದವರೆಗೂ ಒಬ್ಬಳೇ ಒಬ್ಬಳು ಲಕ್ಷ್ಮಿ. ಪ್ರತಿ ಕಲ್ಪಕ್ಕೂ ಶಿವ, ಬ್ರಹ್ಮ, ಬೇರೆ ಬೇರೆ ಪ್ರತಿ ಮನ್ವಂತರಕ್ಕೂ ಇಂದ್ರ ಬೇರೆ, ಇಂತಹ ಎಲ್ಲದ ಸ್ಥಾನವನ್ನು ಅಲಂಕರಿಸಿದ ಮಹಾನುಭಾವಳಾದ ಲಕ್ಷ್ಮಿಯು ಅವಳ ಅಸ್ತಿತ್ವ, ಜ್ಞಾನ, ಇಚ್ಛೆ, ಶಕ್ತಿ ಎಲ್ಲವೂ ಪರಿಪೂರ್ಣವಾಗಿ ಭಗವಂತನಾಧೀನ. ಒಂದು ತೃಣ ದೇವರಿಚ್ಛೆಯಿಲ್ಲದೆ ಆಚೆ ಈಚೆ ಕಡೆ ಸರದಾಡುವುದಿಲ್ಲ ಎನ್ನುವದು ಎಷ್ಟು ಸತ್ಯವೋ ಅಷ್ಟೇ ಪರಮ ಸತ್ಯ ಮಹಾಲಕ್ಷ್ಮಿ ಭಗವಂತನ ಇಚ್ಛೆ ಇಲ್ಲದೇ ಯಾವುದೇ ಪ್ರವೃತ್ತಿ ಪಡೆಯುವುದಕ್ಕೆ ಸಾಧ್ಯವಿಲ್ಲ.
ಇದನ್ನು ತಿಳಿಸುವುದಕ್ಕಾಗಿ ಶ್ರೀಮದ್ ಭಾಗವತದಲ್ಲಿ ಅಮೃತ ಮಥನದ ಒಂದು ಪ್ರಸಂಗವನ್ನು ಅಷ್ಟಮ ಸ್ಕಂದದಲ್ಲಿ, ವರ್ಣನೆ ಮಾಡುತ್ತಾರೆ. ದೇವತೆಗಳಿಗೆ ಅಸುರರು ಪರಾಭವ ಆದ ಪ್ರಸಂಗದಲ್ಲಿ ಹೇಗೆ ಅಸುರರನ್ನು ಗೆದ್ದು ತಮ್ಮ ಐಶ್ವರ್ಯ ಅಧಿಕಾರವನ್ನು ಪಡೆಯಬೇಕು ಎಂಬ ಆಲೋಚನೆ ಬಂದಾಗ ಶರಣು ಹೋಗಿದ್ದು ಭಗವಂತನನ್ನು.
ನಮಗೆ ಇಷ್ಟ ಪ್ರಾಪ್ತಿಯಾಗುವದು ದೇವರಿಂದ. ಹಾಗೂ ಅನಿಷ್ಟ ನಿವೃತ್ತಿಯಾಗುವುದು ದೇವರಿಂದ. ತಪ್ಪು ಮಾಡಿದರೆ ದ್ರೋಹ ಮಾಡಿದರೆ ಅನಿಷ್ಟವಾಗುವದು. ವಿಷ್ಣುವಿಗೆ ಅರ್ಪಣೆ ಮಾಡಿದ್ದ ನಿರ್ಮಾಲ್ಯವನ್ನು ಮಹಾನುಭಾವರಾದ ದುರ್ವಾಸರು ಇಂದ್ರ ದೇವರಿಗೆ ಕೊಟ್ಟಾಗ, ತಾನು ಶಿರಸಾ ಧಾರಣೆ ಮಾಡಿ ಯೋಗ್ಯವಾದ ಸ್ಥಾನದಲ್ಲಿ ಇಡದಂತೆ ಐರಾವತದ ತಲೆಯ ಮೇಲಿಟ್ಟರೆ ಅದು ಕಾಲಿಗೆ ಹಾಕಿ ತುಳಿದಿದ್ದಕ್ಕೆ ಕೋಪಗೊಂಡ ದುರ್ವಾಸರು ಇಂದ್ರನಿಗೆ ಐಶ್ವರ್ಯ ಭ್ರಷ್ಟನಾಗುವಂತೆ ಶಾಪಕೊಟ್ಟರು.
ವಿಷ್ಣುವಿನ ತಿರಸ್ಕಾರ ಎಂತಹ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿಯನ್ನು ಕೂಡ ಯಾವದೇ ಅಧೋಗತಿಗೆ ಕರೆದುಕೊಂಡು ಹೋಗುತ್ತದೆ ಎಂಬುದಕ್ಕೆ ಇದೊಂದು ಉಚಿತ ಉದಾಹರಣೆ. ಮಾನಸಿಕವಾದ ಚಿಂತನೆ ಬೇಕಾದರೂ ನಮಗೆ ದೇವರ ಅನುಗ್ರಹಬೇಕು. ಅದನ್ನು ದೃಷ್ಟಾಂತದ ಮೂಲಕ ಭಾಗವತ ತಿಳಿಸುತ್ತದೆ. ಈ ಪ್ರಸಂಗದಲ್ಲಿ ದೇವತೆಗಳೆಲ್ಲ ಏನು ಮಾಡಬೇಕು ಎಂದು ಭಗವಂತನಿಗೆ ಮೊರೆ ಹೊಕ್ಕಾಗ ದೇವರೇ ಅಮೃತ ಮಥನ ಮಾಡಿ ಮಂದರ ಪರ್ವತವನ್ನು ತೆಗೆದುಕೊಂಡು ಬಂದು ಸಮುದ್ರದಲ್ಲಿ ಇಟ್ಟು ಅದನ್ನು ಮಥನ ಮಾಡಬೇಕು. ಅಲ್ಲೇ ವಿಷವು ಬರುತ್ತೆ ಅಮೃತವೂ ಬರುತ್ತೆ ಇನ್ನೇನೇನೋ ಬರುತ್ತವೆ. ಕೊನೆಗೆ ಅಮೃತ ನಿಮ್ಮ ಪಾಲಿಗೆ ಬರುವುದು ನಿಶ್ಚಿತ ಎಂಬ ವಿವೇಕವನ್ನು ಕೊಟ್ಟ ಆ ದೇವರು. ಜೀವನದಲ್ಲಿ ದೊಡ್ಡ ದೊಡ್ಡ ತುಮುಲಗಳು ನಮಗೆ ಬಂದಾಗ ಸರಿಯಾದ ಮಾರ್ಗದರ್ಶನ ನಮಗೆ ಭಗವಂತನ ಪ್ರೇರಣೆಯಿಂದಲೇ ನಮಗೆ ದಕ್ಕುತ್ತದೆ ಎಂದು ತಿಳಿಯಬೇಕು. ಅಂತರ್ಯಾಮಿಯಾಗಿಯೂ ದೇವರು ಪ್ರೇರಣೆ ಮಾಡಬಹುದು. ಮಹಾಭಾರತ ಭಾಗವತ ಅದೇ ಶಾಸ್ತ್ರಗಳ ಮೂಲಕವಾಗಿ, ಗುರುಗಳ ಮೂಲಕವಾಗಿಯೂ ಪ್ರೇರಣೆ ಮಾಡಬಹುದು.