ಭರತ್ ರೆಡ್ಡಿ ಕಚೇರಿಯಲ್ಲಿ ಮುಂದುವರಿದ ಇಡಿ ಶೋಧ

Advertisement

ಬಳ್ಳಾರಿ: ಬಳ್ಳಾರಿಯ ಗಾಂಧಿನಗರದಲ್ಲಿರುವ ನಗರ ಶಾಸಕ ನಾರಾ ಭರತ್ ರೆಡ್ಡಿಯವರ ಕಚೇರಿ ಮೇಲೆ ನಡೆದಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ದಾಳಿ ಎರಡನೇ ದಿನ ಭಾನುವಾರವೂ ಮುಂದುವರೆಯಿತು.
ಫೆ.೧೦ ರಂದು ಶನಿವಾರ ಬೆಳಗ್ಗೆ ಶಾಸಕ ಭರತ್‌ರೆಡ್ಡಿ ಮತ್ತವರ ಸಂಬಂಧಿಗಳು, ಆಪ್ತರ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿದ ಇ.ಡಿ.ಅಧಿಕಾರಿಗಳು, ಅಗತ್ಯ ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು. ಸಂಜೆ ಹೊತ್ತಿಗೆ ಎಲ್ಲ ಕಡೆ ಪರಿಶೀಲನೆ ಮುಗಿಸಿರುವ ಇ.ಡಿ.ಅಧಿಕಾರಿಗಳು, ಬಳ್ಳಾರಿಯ ಗಾಂಧಿನಗರದಲ್ಲಿನ ಕಚೇರಿಯಲ್ಲಿ ಮಾತ್ರ ಶೋಧಕಾರ್ಯ ನಡೆದಿದ್ದು, ಎರಡನೇ ದಿನವಾದ ಭಾನುವಾರವೂ ಮುಂದುವರೆಸಿದ್ದಾರೆ.
ಮನಿ ಲ್ಯಾಂಡ್ರಿಂಗ್, ಆದಾಯಕ್ಕಿಂತಲೂ ಅಧಿಕ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (ಐಟಿ) ದಾಳಿ ನಡೆಸಿದ್ದರು. ಅದರ ಮುಂದುವರೆದ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಶಾಸಕರು ಮನೆಯಲ್ಲೇ ಇದ್ದರೆ, ಅವರ ತಂದೆ ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿ ಅವರು ಕಚೇರಿಯಲ್ಲಿ ಇದ್ದರು ಎನ್ನಲಾಗುತ್ತಿದೆ. ಮೂಲತಃ ಗ್ರಾನೈಟ್ ಉದ್ಯಮಿಗಳಾಗಿರುವ ನಾರಾ ಸೂರ್ಯನಾರಾಯಣರೆಡ್ಡಿ, ಶಾಸಕ ನಾರಾ ಭರತ್‌ರೆಡ್ಡಿ ಅವರು, ನೆರೆಯ ಆಂಧ್ರ ಪ್ರದೇಶದ ಹಲವುಕಡೆ ಮತ್ತು ನೆರೆಯ ಕೊಪ್ಪಳ ಜಿಲ್ಲೆಯಲ್ಲಿ ಕ್ವಾರಿಗಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.