ಭಾರತಕ್ಕೆ ಜಿಂಬಾಬ್ವೆ ಸುಲಭ ತುತ್ತು

Advertisement

ಹರಾರೆ: ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸೊಗಸಾದ ಪ್ರದರ್ಶನ ತೋರಿದ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಭಾರತ ತಂಡ, ಆತಿಥೇಯ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹತ್ತು ವಿಕೆಟ್ ಭರ್ಜರಿ ಜಯ ದಾಖಲಿಸಿದೆ.
ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಲು ನಿಗದಿತ ೫೦ ಓವರ್‌ಗಳಲ್ಲಿ ೧೯೦ ರನ್ ಸೇರಿಸುವ ಗುರಿ ಪಡೆದ ಭಾರತ, ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಅವರ ಶ್ರೇಷ್ಠ ಬ್ಯಾಟಿಂಗ್ ನೆರವಿನಿಂದ ಇನ್ನೂ ೧೯.೧ ಓವರ್‌ಗಳು ಬಾಕಿ ಇರುವಂತೆ ೩೦.೫ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೧೯೨ ರನ್ ಮಾಡಿ ಸುಲಭ ಜಯ ಪಡೆಯಿತು.
ಭಾರತದ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಆರಂಭದಿಂದಲೇ ಜಿಂಬಾಬ್ವೆ ದಾಳಿಯನ್ನು ಆತ್ಮವಿಶ್ವಾಸದಿಂದ ಎದುರಿಸಿ ವೇಗವಾಗಿ ರನ್ ಸೇರಿಸುತ್ತ ಸಾಗಿದರು. ಓವರ್‌ಗಳು ಉರುಳುತ್ತಿದ್ದಂತೆ ತಂಡದ ರನ್ ವೇಗ ಹೆಚ್ಚು ನಡೆದರೆ, ಭಾರತದ ಜೋಡಿಯನ್ನು ಬೇರ್ಪಡಿಸಲು ಆತಿಥೇಯ ತಂಡದ ನಾಯಕ ರೆಜಿಸ್ ಚಕಬ್ವಾ ಹಲವಾರು ಬಾರಿ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿದರೂ ಯಶ ಕಾಣದೇ ಹೋದರು.
ವಿಕೆಟ್ ಬಳಿ ಗಟ್ಟಿಯಾಗಿ ನಿಂತು ಜಿಂಬಾಬ್ವೆ ದಾಳಿಯನ್ನು ಆತ್ಮವಿಶ್ವಾಸದಿಂದ ಎದುರಿಸಿ ತಂಡವನ್ನು ಸುಲವಾಗಿ ದಡ ಸೇರಿಸಿದ ಶುಭಮನ್ ಗಿಲ್ ಮಿಂಚಿನ ೮೨ (೭೨ ಎಸೆತ, ೧೦ ಬೌಂಡರಿ, ೧ ಸಿಕ್ಸರ್) ಹಾಗೂ ಶಿಖರ್ ಧವನ್ ೮೧ (೧೧೩ ಎಸೆತ, ೯ ಬೌಂಡರಿ) ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ಗೆ ಕಳುಹಿಸಲ್ಪಟ್ಟ ಜಿಂಬ್ವಾಬ್ವೆ, ಭಾರತೀಯರ ಮಾರಕ ದಾಳಿಗೆ ತತ್ತರಿಸಿ ೪೦.೩ ಓವರ್‌ಗಳಲ್ಲಿ ೧೮೯ ರನ್‌ಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು.

cricket

ಜಿಂಬಾಬ್ವೆ ಇನ್ನಿಂಗ್ಸ್ ಆರಂಭಿಸಿದ ಇನೊಸೆಂಟ್ ಕೈಯಾ ಹಾಗೂ ತಡಿವಾನಾಶೆ ಮರುಮನಿ, ಭಾರತದ ದಾಳಿಯನ್ನು ಆತ್ಮವಿಶ್ವಾಸದಿಂದ ಎದುರಿಸಿ ನಿಧಾನವಾಗಿ ರನ್ ಸೇರಿಸುತ್ತ ಸಾಗಿದರು. ತಂಡದ ಮೊತ್ತ ೨೬ ರನ್‌ಗಳಾಗುವಷ್ಟರಲ್ಲಿ ಕೈಯಾ (೪) ಹಾಗೂ ಮರುಮನಿ (೮) ದೀಪಕ್ ಚಾಹರ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಮುಂದೆ ತಂಡದ ಮೊತ್ತಕ್ಕೆ ಐದು ರನ್ ಸೇರ್ಪಡೆಯಾಗುತ್ತಿದ್ದಂತೆ ಸೀನ್ ವಿಲಿಯಮ್ಸ್ (೧) ಹಾಗೂ ವೆಸ್ಲಿ ಮಾಧೆವೆರೆ (೫) ಕ್ರಮವಾಗಿ ಮೊಹಮ್ಮದ್ ಸಿರಾಜ್ ಹಾಗೂ ದೀಪಕ್ ಚಾಹರ್‌ಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಆತಿಥೇಯ ತಂಡ ತೀವ್ರ ಒತ್ತಡಕ್ಕೆ ಸಿಲುಕಿತು. ಐದನೇ ವಿಕೆಟ್‌ಗೆ ಸಿಕಂದರ್ ರಜಾ ಹಾಗೂ ನಾಯಕ ರೆಜಿಸ್ ಚಕಬ್ವಾ ಜೋಡಿ ೬ ಓವರ್‌ಗಳಲ್ಲಿ ೩೫ ರನ್ ಸೇರಿಸಿ ತಂಡದ ಮೊತ್ತವನ್ನು ೧೬.೧ ಓವರ್‌ಗಳಲ್ಲಿ ೬೬ ಕ್ಕೆ ಹೆಚ್ಚಿಸಿದರು. ಆಗ ೧೨ (೧೭ ಎಸೆತ, ೧ ಬೌಂಡರಿ) ರನ್ ಮಾಡಿದ್ದ ಸಿಕಂದರ್ ರಜಾ ಅವರನ್ನು ಪ್ರಸಿದ್ಧ ಕೃಷ್ಣ ಪೆವಿಲಿಯನ್‌ಗೆ ಅಟ್ಟಿದರು.
ಮುಂದೆ ತಂಡದ ಮೊತ್ತಕ್ಕೆ ೪೧ ರನ್ ಸೇರ್ಪಡೆಯಾಗುತ್ತಿದ್ದಂತೆ ಜಿಂಬಾಬ್ವೆ ರಾಯನ್ ಬರ್ಲ್ (೧೧) ಹಾಗೂ ಲ್ಯೂಕ್ ಜೊಂಗ್ವೆ (೧೩) ಅವರ ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ ೧೧೦ ರನ್‌ಗಳಾಗಿದ್ದಾಗ ನಾಯಕತ್ವದ ಜವಾಬ್ದಾರಿಯುತವಾಗಿ ಆಡುತ್ತಿದ್ದ ರೆಜಿಸ್ ಚಕಬ್ವಾ, ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಕ್ಲೀನ್‌ಬೋಲ್ಡ್ ಆಗುವ ಮುನ್ನ ಗಳಿಸಿದ್ದು ೩೫ (೫೧ ಎಸೆತ, ೪ ಬೌಂಡರಿ) ರನ್‌ಗಳು.

ಉತ್ತಮ ಜೊತೆಯಾಟ
೨೮.೩ ಓವರ್‌ಗಳಲ್ಲಿ ೧೧೦ ರನ್‌ಗೆ ಎಂಟು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಜಿಂಬಾಬ್ವೆ ತಂಡಕ್ಕೆ ಬ್ರಾಡ್ ಇವಾನ್ಸ್ ಹಾಗೂ ರಿಚರ್ಡ್ ನಾಗರವಾ ಜೋಡಿ ಒಂಬತ್ತನೇ ವಿಕೆಟ್‌ಗೆ ೧೧.೫ ಓವರ್‌ಗಳಲ್ಲಿ ೭೦ ರನ್ ಸೇರಿಸಿ ತಂಡದ ಮೊತ್ತವನ್ನು ೧೭೦ ಕ್ಕೆ ಹೆಚ್ಚಿಸಿ ತಂಡಕ್ಕೆ ಚೇತರಿಕೆ ನೀಡಿದರು.
ರಿಚರ್ಡ್ ನಾಗರವಾ ಆಕರ್ಷಕ ೩೪ (೪೨ ಎಸೆತ, ೩ ಬೌಂಡರಿ, ೧ ಸಿಕ್ಸರ್) ರನ್ ಮಾಡಿ ಪ್ರಸಿದ್ಧ ಕೃಷ್ಣಗೆ ಬಲಿಯಾದರು. ಹನ್ನೊಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ವಿಕ್ಟರ್ ನ್ಯಾಯುಚಿ ೮ ರನ್ ಮಾಡಿ ಅಕ್ಷರ್ ಪಟೇಲ್‌ಗೆ ಮೂರನೇ ಬಲಿಯಾಗುತ್ತಿದ್ದಂತೆಯೇ ಜಿಂಬಾಬ್ವೆ ಇನ್ನಿಂಗ್ ೪೦.೩ ಓವರ್‌ಗಳಲ್ಲಿ ೧೮೯ ಕ್ಕೆ ಅಂತ್ಯವಾಯಿತು.
ಉತ್ತಮವಾಗಿ ಬ್ಯಾಟ್ ಮಾಡಿದ ಬ್ರಾಡ್ ಇವಾನ್ಸ್ ಮಿಂಚಿನ ೩೩ (೨೯ ಎಸೆತ, ೩ ಬೌಂಡರಿ, ೧ ಸಿಕ್ಸರ್) ರನ್ ಮಾಡಿ ಅಜೇಯರಾಗಿ ಉಳಿದರು.
ಭಾರತದ ಪರ ಅಕ್ಷರ್ ಪಟೇಲ್ ೨೪ ಕ್ಕೆ ಮೂರು, ದೀಪಕ್ ಚಾಹರ್ ೨೭ ಕ್ಕೆ ಮೂರು, ಪ್ರಸಿದ್ಧ ಕೃಷ್ಣ ೫೦ ಕ್ಕೆ ಮೂರು ವಿಕೆಟ್ ಹಾಗೂ ಮೊಹಮ್ಮದ್ ಸಿರಾಜ್ ೩೬ ಕ್ಕೆ ಒಂದು ವಿಕೆಟ್ ಉರುಳಿಸಿದರು
೭ ಓವರ್‌ಗಳಲ್ಲಿ ಕೇವಲ ೨೭ ರನ್ ನೀಡಿ ಮೂರು ವಿಕೆಟ್ ಉರುಳಿಸಿದ ಭಾರತದ ದೀಪಕ್ ಚಾಹರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎರಡನೇ ಏಕದಿನ ಪಂದ್ಯ ಇದೇ ಮೈದಾನದಲ್ಲಿ ಆಗಷ್ಟ್ ೨೦ ರಂದು ನಡೆಯಲಿದೆ.