ಭಾರತೀಯತೆಗೆ ಪೂರಕವಾಗಲಿ ನೂತನ ಕ್ರಿಮಿನಲ್ ಕಾಯ್ದೆ

ಸಂಪಾದಕೀಯ
Advertisement

ಪ್ರಸ್ತಾವಿತ ಹೊಸ ಕಾನೂನುಗಳು ಕೇವಲ ಭಾರತೀಯ ಹೆಸರಿನೊಂದಿಗೆ ಪುಸ್ತಕದಲ್ಲಿ ಛಾಪಿತವಾಗದೇ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭ- ವೈವಿಧ್ಯಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷೆ ನಿರ್ಧರಿಸುವ ಮಾಪಕಗಳಾಗಬೇಕು.

ಬ್ರಿಟಿಷ್ ಗುಲಾಮಿತನವನ್ನು ನೆನಪಿಸುವಂತಿದ್ದ ಕ್ರಿಮಿನಲ್ ಕಾನೂನುಗಳನ್ನು ಬದಲಿಸಿರುವುದು ಸ್ವಾಗತಾರ್ಹ. ಆದರೆ ದೇಶದ್ರೋಹ ಕಾಯ್ದೆಯನ್ನು ರದ್ದು ಮಾಡಿರುವುದಾಗಿ ಹೇಳುತ್ತಲೇ, ಸಾರ್ವಭೌಮತ್ವ ವಿರುದ್ಧ ಮಾತನಾಡುವ ಆರೋಪಕ್ಕೆ ಗುರಿಯಾದವರನ್ನು ಏಕಪಕ್ಷೀಯ ವಿಚಾರಣೆಗೆ ಒಳಪಡಿಸಲು ಅವಕಾಶ ಕಲ್ಪಿಸಲಿರುವುದು ಅಪಾಯಕಾರಿ.
ಆರೋಪ ಬಂದಾಗ, ಸಮರ್ಥನೆ ಮಾಡಿಕೊಳ್ಳುವ ಅವಕಾಶ ಇರಬೇಕು ಎಂಬುದು ನಾಗರಿಕ ಕಾಯ್ದೆಗಳು ಬರುವ ಮೊದಲಿನಿಂದಲೂ ಇರುವ ಮಾನವ ಸಹಜ ನಡಾವಳಿ. ಬದಲಾದ ಸ್ವರೂಪ ಹಾಗೂ ಕಲಂ ಅಡಿಯಲ್ಲಿ ಅವತರಿಸಲಿರುವ ದೇಶದ್ರೋಹ ಕಾಯ್ದೆ ಇದಕ್ಕೆ ಅವಕಾಶ ನೀಡುವುದೇ ಎನ್ನುವುದು ಈಗ ದೇಶವ್ಯಾಪಿ ಚಿಂತೆಗೆ ಕಾರಣವಾಗಿರುವ ಅಂಶ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿರುವ ನೂತನ ಕ್ರಿಮಿನಲ್ ವಿಧೇಯಕಗಳನ್ನು ಪರಿಶೀಲಿಸಲಿರುವ ಸಂಸತ್ತಿನ ಸ್ಥಾಯಿ ಸಮಿತಿ ಈ ಸೂಕ್ಷ್ಮವನ್ನು ಗಮನಿಸಬೇಕಾಗಿದೆ.
ಉಳಿದ ಅಪರಾಧಗಳಿಗೆ ಸಂಬಂಧಿಸಿದಂತೆ, ಇಂಗ್ಲಿಷರು ಹೇರಿದ್ದ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ (ಸಾಕ್ಷ್ಯ ಕಾಯ್ದೆ) ಬದಲಾಗಿ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಎವಿಡೆನ್ಸ್ ಕಾಯ್ದೆಗಳನ್ನು ತರಲು ಹೊರಟಿರುವುದು ಸರಿಯಾದ ಕ್ರಮ. ನೂತನ ಕಾಯ್ದೆಗಳ ಹೆಸರು ಮಾತ್ರ ಭಾರತೀಯ ಆಗದೇ, ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭ- ವೈವಿಧ್ಯಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷೆ ನಿರ್ಧರಿಸುವ ಮಾಪಕಗಳಾಗಬೇಕು.
ಐಪಿಸಿ- ಸಿಆರ್‌ಪಿಸಿ ಕಾನೂನುಗಳನ್ನು ಇಟ್ಟುಕೊಂಡು ಮಾಡಲಾಗುತ್ತಿದ್ದ ವಿಚಾರಣೆಗಳಲ್ಲಿ ಬ್ರಿಟಿಷ್ ಕಾಲದ ಸರ್ವಾಧಿಕಾರಿ ಮನಸ್ಥಿತಿ ಇರುತ್ತಿತ್ತು. ಐಪಿಸಿ, ಸಿಆರ್‌ಪಿಸಿ ಕಾಯ್ದೆಗಳಲ್ಲಿ ಇದ್ದ ನ್ಯೂನತೆಗಳು ಸಾಕಷ್ಟು ಚರ್ಚಿತವಾಗುತ್ತಿದ್ದವು. ಬ್ರಿಟಿಷರು ೧೮೬೦ರಷ್ಟು ಹಿಂದೆ ಮಾಡಿದ್ದ ಕಾನೂನುಗಳೇ ಇನ್ನೂ ಇರುವುದು ಎಷ್ಟು ಸರಿ ಎಂಬ ಜಿಜ್ಞಾಸೆ ಸಾಮಾನ್ಯ ನಾಗರಿಕನ ಮಟ್ಟದಲ್ಲೂ ಕೇಳಿ ಬರುತ್ತಿತ್ತು. ಪ್ರಸಕ್ತ ಭಾರತೀಯ ಸನ್ನಿವೇಶಕ್ಕೆ ಹೊಂದುವಂತಹ ಬದಲಾವಣೆಗಳನ್ನು ಇವುಗಳಿಗೆ ಮಾಡಬೇಕು ಎಂಬ ಅನಿಸಿಕೆಯನ್ನು ಅನೇಕ ರಾಜ್ಯಗಳ ಶಾಸನ ಸಭೆಗಳು ವ್ಯಕ್ತಮಾಡಿದ್ದವು. ಈಗ ಇವುಗಳನ್ನು ಬದಲಿಸಲಿರುವುದು ಬಹುತೇಕರ ಭಾವನೆಗೆ ಸ್ಪಂದಿಸಿದಂತಾಗಿದೆ.ಜನರ ಆಶೋತ್ತರಗಳು ಮತ್ತು ಸಮಕಾಲೀನ ಅವಶ್ಯಕತೆಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಕ್ರಿಮಿನಲ್ ಕಾಯ್ದೆಗಳು ಜಾರಿಗೊಳ್ಳಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಹೇಳಿದ್ದಾರಷ್ಟೇ. ನಿಜವಾದ ಅರ್ಥದಲ್ಲಿ ಈ ಮಾತು ಜಾರಿಗೆ ಬಂದರೆ, ಭಾರತೀಯ ಅಸ್ಮಿತೆ ಕ್ರಿಮಿನಲ್ ವಿಚಾರಣೆಗೂ ಬಂದೀತು.ಕ್ರಿಮಿನಲ್ ಪ್ರಕರಣ ವಿಚಾರಣೆಯಲ್ಲಿ ಇದುವರೆಗೆ ಸಮಾಜದ ಆಶೋತ್ತರಕ್ಕೆ ಜಾಗವೇ ಇರಲಿಲ್ಲ ಎಂದರೆ ತಪ್ಪಾಗದು. ಗುಂಪು ಅಥವಾ ಕೋಮು ಘರ್ಷಣೆಯಂತಹ ಸಾಮಾಜಿಕ ಸಂಕಷ್ಟ ಕೂಡ, ರೂಲ್ ಮತ್ತು ಕಲಂ ಎನ್ನುವ ಶುಷ್ಕ ಹೆಸರುಗಳಲ್ಲಿ ಕಳೆದು ಹೋಗಿ ಶಿಕ್ಷೆಯೊಂದೇ ಪ್ರಧಾನವಾಗಿರುತ್ತಿತ್ತು. ಈ ಕಾರಣದಿಂದಾಗಿ ತಪ್ಪು ಮಾಡದವರೂ ತಾಪ ಅನುಭವಿಸಬೇಕಾಗುತ್ತಿತ್ತು.
ಜಾರಿಗೊಳ್ಳಲಿರುವ ಹೊಸ ಕಾಯ್ದೆಗಳಲ್ಲಿ ವೈಜ್ಞಾನಿಕ ವಿಚಾರಣೆಗೆ ಹೆಚ್ಚಿನ ಒತ್ತು ಇರುವಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದೆ. ಈಗ ಕಾಲಘಟ್ಟ ಬದಲಾಗಿದೆ. ಹೊಸ ತಲೆಮಾರು ಎಷ್ಟು ಚುರುಕಾಗಿದೆಯೋ, ಅಪರಾಧ ಪ್ರಕರಣಗಳೂ ವಿಭಿನ್ನವಾಗುತ್ತಿವೆ. ಆದ್ದರಿಂದ ದಂಡಂದಶಗುಣ ತತ್ವದ ಸಾಂಪ್ರದಾಯಿಕ ವಿಚಾರಣೆಯನ್ನು ಎಷ್ಟು ಬೇಕೋ ಅಷ್ಟೇ ಇಟ್ಟುಕೊಂಡು, ಉಳಿದ ಬಹುಪಾಲು ಅಂಶಗಳಿಗೆ ತಂತ್ರಜ್ಞಾನ ಬಳಕೆ ಸೂಕ್ತ.ಅಪರಾಧಿಗಳ ಮನಃಪರಿವರ್ತನೆಗೆ ಒತ್ತು ಬರಲಿರುವುದು; ಸಣ್ಣಪುಟ್ಟ ಮತ್ತು ನಗಣ್ಯ ಸ್ವರೂಪದ ಉದ್ದೇಶರಹಿತ ತಪ್ಪುಗಳನ್ನು ಮಾಡುವವರಿಗೆ ಗಿಡ ನೆಡುವ, ಧಾರ್ಮಿಕ ಸ್ಥಳಗಳಲ್ಲಿ ಮತ್ತು ಅನಾಥಾಶ್ರಮಗಳಲ್ಲಿ ಸೇವೆ ಸಲ್ಲಿಸುವ, ಟ್ರಾಫಿಕ್ ಸಿಗ್ನಲ್‌ಗಳನ್ನು ನಿರ್ವಹಣೆ ಮಾಡುವಂತಹ ಶಿಕ್ಷೆ ನೀಡಲು ಉದ್ದೇಶಿಸಿರುವುದು ಖಂಡಿತ ಬದಲಾವಣೆಯ ದ್ಯೋತಕ. ಇಂತಹ ಅಪರಾಧಗಳಿಗೆ ಸಾಮಾಜಿಕ ಸೇವೆಯ ಶಿಕ್ಷೆ ಪ್ರಕಟವಾಗುವ ಮೊದಲು, ವಿಚಾರಣೆ ಹಂತದಲ್ಲಿ ಅನಗತ್ಯ ಖಾಕಿ ದರ್ಪ ನಡೆಯದಂತೆ ಎಚ್ಚರ ವಹಿಸಬೇಕು. ಇಲ್ಲವಾದರೆ ಈ ಸದುದ್ದೇಶ ವ್ಯರ್ಥವಾಗಲಿದೆ.