ಭಾರಿ ಮಳೆ ವೇಳೆ ಕ್ಷೇತ್ರ ಭೇಟಿ ಬೇಡ

Advertisement

ಮಂಗಳೂರು: ಭಾರಿ ಮಳೆ ವೇಳೆ ಕ್ಷೇತ್ರಗಳ ಸಂದರ್ಶನ ಹಾಕಿಕೊಳ್ಳುವುದು ಬೇಡ, ಅನಿವಾರ್ಯವಾಗಿ ಆಗಮಿಸಿದರೂ ನದಿಗೆ ಇಳಿಯುವುದು, ಸೆಲ್ಫಿ ಕ್ರೇಜ್ ಮಾಡಬೇಡಿ, ಈ ಬಗ್ಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಫಲಕ ಅಳವಡಿಸಿದ್ದು, ಇದನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವಾಸಿ ತಾಣಗಳಲ್ಲಿ ನೀರಿಗೆ ಇಳಿಯಲು ಅವಕಾಶ ಇಲ್ಲ. ರಸ್ತೆ ಬಂದ್ ಆಗುವ ಸನ್ನಿವೇಶ ಕಂಡುಬಂದರೆ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು.
ಟ್ರೆಕ್ಕಿಂಗ್‌ಗೆ ಅವಕಾಶ ಇಲ್ಲ…
ಟ್ರೆಕ್ಕಿಂಗ್ ತಾಣ ಭೇಟಿ, ಹೆದ್ದಾರಿ ನಡುವೆ ಪ್ರಕೃತಿ ಆಸ್ವಾದಕ್ಕೆ ವಾಹನ ನಿಲ್ಲಿಸಿದರೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ, ಸೇತುವೆ ಮೇಲೆ, ರಸ್ತೆ ಮೇಲೆ ನೀರು ಬಂದರೆ, ಕುಸಿತ ಜಾಗಗಳಲ್ಲಿ, ಇನ್ನಿತರೆ ಅಪಾಯಕಾರಿ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಫಲಕ ಅಳವಡಿಸಲಾಗುವುದು. ಇದನ್ನು ಮೀರಿ ವರ್ತಿಸಿದರೆ ಪ್ಯಾಟ್ರೋಲಿಂಗ್ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕರು ಕೂಡ ಅಪಾಯಕಾರಿ ಸ್ಥಳಗಳು ಕಂಡುಬಂದರೆ ಕೂಡಲೇ ಜಿಲ್ಲಾಡಳಿತ ಕಂಟ್ರೋಲ್ ರೂಂ(೧೦೭೭) ಅಥವಾ ಪೊಲೀಸ್ ಕಂಟ್ರೋಲ್ ರೂಂ(೧೧೨)ಗೆ ಮಾಹಿತಿ ನೀಡಬಹುದು. ಜಿಲ್ಲಾಡಳಿತ ೩೪ ಫೋನ್ ಲೈನ್‌ಗಳನ್ನು ಹೊಂದಿದೆ. ಇದರಿಂದ ಕೂಡಲೇ ಸ್ಪಂದನಕ್ಕೆ ಅನುಕೂಲವಾಗುತ್ತದೆ ಎಂದು ದ. ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ. ಪಿ. ತಿಳಿಸಿದ್ದಾರೆ