ಭುಗಿಲೆದ್ದ ಆಕ್ರೋಶ-ಸರ್ಕಾರದ ವಿರುದ್ಧ ಸಿಡಿದೆದ್ದ ಅನ್ನದಾತ

Advertisement

ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಮತ್ತೆ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿರುವುದರಿಂದ ಕಾವೇರಿ ಹೋರಾಟಗಾರರ ಆಕ್ರೋಶ ಭುಗಿಲೆದ್ದಿದೆ.
ನಗರದ ಸರ್ ಎಂ ವಿ ಪ್ರತಿಮೆ ಎದುರು ನಿರಂತರ ಧರಣಿಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮುಖಂಡರ ಜೊತೆಗೂಡಿದ ಮದ್ದೂರು ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರು ಮಾಜಿ ಸಚಿವ ಡಿ.ಸಿ ತಮ್ಮಣ್ಣ ನೇತೃತ್ವದಲ್ಲಿ ಭಾಗಿಯಾದರು ಅದೇ ರೀತಿ ಮಂಡ್ಯ ನಗರದ ವಾಯು ವಿಹಾರಿ ಬಳಗದ ಸದಸ್ಯರು ಕಾವೇರಿ ಹೋರಾಟ ಬೆಂಬಲಿಸಿದರು.
ಬೆಂಗಳೂರು – ಮೈಸೂರು ಹೆದ್ದಾರಿ ತಡೆ ಮಾಡಿದ ಪ್ರತಿಭಟನಾ ನಿರತರು ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣರಾಜಸಾಗರದಿಂದ ನೆರೆ ರಾಜ್ಯಕ್ಕೆ ನಿರಂತರವಾಗಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಕೂಡಲೇ ನೀರು ಸ್ಥಗಿತ ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯ ಪಡೆಯಲು ಸರ್ಕಾರ ಸಲಹಾ ಸಮಿತಿಯನ್ನು ರಚಿಸಬೇಕು ಇದರಲ್ಲಿ ತಜ್ಞರನ್ನು ನೇಮಿಸಿ ಕಾಲಕಾಲಕ್ಕೆ ಎದುರಾಗುವ ಸಮಸ್ಯೆಗಳ ಬಗ್ಗೆ ವರದಿ ನೀಡಿದರೆ ಪರಿಹಾರ ರೂಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಅಸ್ತಿತ್ವಕ್ಕೆ ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದೆ ಆಗಿದ್ದ ಎಲ್ಲಾ ಒಪ್ಪಂದಗಳು ರದ್ದು ಆಗಿದೆ,ಆದರೆ ಕಾವೇರಿ ಒಪ್ಪಂದ ಮಾತ್ರ ಹೇಗೆ ಮುಂದುವರೆಯಿತು. ಬ್ರಿಟಿಷರ ಕಾಲದ ಒಪ್ಪಂದ ಈಗಲೂ ಚಾಲ್ತಿಯಲ್ಲಿದೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಮಾತನಾಡಿ, ಕಾವೇರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿರುವುದಕ್ಕೆ ಸಮರ್ಥ ನೀರಾವರಿ ತಜ್ಞರ ತಂಡ ಇಲ್ಲಇರುವುದೇ ಕಾರಣವಾಗಿದೆ, ನೀರಾವರಿ ತಜ್ಞರು ಸಮಗ್ರ ಮಾಹಿತಿಯನ್ನು ಕಾನೂನು ತಂಡಕ್ಕೆ ಒದಗಿಸಿ ಕೊಟ್ಟರೆ ಸಮರ್ಥವಾದ ಮಾಡಲು ಸಾಧ್ಯ ಆದರೆ ಅಂತ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇಲ್ಲವಾಗಿದೆ ಎಂದು ಹೇಳಿದರು.
ಕಾವೇರಿ ಹೋರಾಟದ ಬಗ್ಗೆ ಮುಖ್ಯಮಂತ್ರಿಗಳು ಅಸಡ್ಡೆ ತೋರಿದ್ದಾರೆ, ಹೋರಾಟಗಾರರ ಜೊತೆ ಕನಿಷ್ಠ ಮಾತುಕತೆಯನ್ನು ನಡೆಸಿಲ್ಲ, ಬೀದಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದರು ಸ್ಪಂದಿಸದೆ ಇರುವುದು ನಾಗರಿಕ ಸರ್ಕಾರದ ಲಕ್ಷಣವಲ್ಲ,ಮುಖ್ಯಮಂತ್ರಿಗಳ ನಡೆ ನಾಚಿಕೆಗೇಡು, ನೀರು ಬಿಡುವುದಿಲ್ಲ ಎಂಬ ನಿರ್ಣಯ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದ್ದು, ಕಾನೂನು ಹೋರಾಟಕ್ಕೆ ಮುಂದಾಗ ಬೇಕಾಗಿದೆ ಎಂದು ಹೇಳಿದರು.
ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್,ಮದ್ದೂರು ತಾಲೂಕು ಘಟಕದ ಚಿಕ್ಕ ತಿಮ್ಮೇಗೌಡ, ಬಸವರಾಜ್, ಆದಿಲ್, ಮಾದನಾಯಕನಹಳ್ಳಿ ರಾಜಣ್ಣ, ಆತಗೂರುವೆಂಕಟಚಲುವಯ್ಯ ,ರತ್ನಮ್ಮ,ಪ್ರಮೀಳಾ,ಆತ್ಮನಂದ,ಅರವಿಂದ, ಪ್ರವೀಣ್, ಸ್ವಾಮಿ ನೇತೃತ್ವವಹಿಸಿದ್ದರು.
ಜಿಲ್ಲಾ ರೈತ ರಕ್ಷಣಾ ಸಮಿತಿಯ ಸುನಂದ ಜಯರಾಂ.ಎಂ.ಎಸ್ ಆತ್ಮಾನಂದ,ಕೆ. ಬೋರಯ್ಯ, ಅಂಬುಜಮ್ಮ,ರೈತ ಸಂಘದ ಇಂಡು ವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ದಸಂಸ ಎಂವಿ ಕೃಷ್ಣ, ನಾರಾಯಣ್,ವಾಯು ವಿಹಾರಿ ಬಳಗದ ಎಸ್. ಡಿ.ನಾಗರಾಜ್.ಕೃಷ್ಣಪ್ಪ, ಮಂಚೇಗೌಡ ನೇತೃತ್ವ ವಹಿಸಿದ್ದರು.