ಮಂತ್ರಿಗಿರಿಯ ಶೀಲದ ಮಹತ್ವ

Advertisement

ಸಾರ್ವಜನಿಕ ಬದುಕಿನಲ್ಲಿರುವವರು ಯಾವಾಗಲೂ ಸೀಸರನ ಹೆಂಡತಿಯಂತೆ ಸಂಶಯಾತೀತಳಾಗಿರಬೇಕು ಎಂಬ ನುಡಿಗಟ್ಟಿಗೆ ಅನುಗುಣವಾಗಿ ಜಗತ್ತಿನಾದ್ಯಂತ ವೈಯಕ್ತಿಕ ನೆಲಗಟ್ಟಿನ ಆರೋಪಗಳು ಮಂತ್ರಿಗಳು ಸೇರಿದಂತೆ ಅಧಿಕಾರಸ್ಥರ ಮೇಲೆ ಬಂದಾಗ ಸಂಬಂಧಪಟ್ಟವರು ರಾಜೀನಾಮೆ ಕೊಟ್ಟಿರುವ ಪ್ರಸಂಗಗಳು ಹಲವಾರು. ಹೀಗೆ ರಾಜೀನಾಮೆ ಕೊಟ್ಟಾಕ್ಷಣ ರಾಜೀನಾಮೆ ಕೊಟ್ಟ ಮಂತ್ರಿ ಆರೋಪವನ್ನು ಒಪ್ಪಿಕೊಂಡಂತೆ ಅಲ್ಲ. ಇದೊಂದು ರೀತಿಯ ಸಚ್ಚಾರಿತ್ರö್ಯದ ವರ್ತನೆ. ಸಾರ್ವಜನಿಕರ ದೃಷ್ಟಿಯಲ್ಲಿ ನಿಷ್ಕಳಂಕಿತ ಹಾಗೂ ನಿರ್ದೋಷಿ ಎಂಬುದನ್ನು ನೈತಿಕ ನೆಲೆಯಲ್ಲಿ ಸಾಬೀತುಪಡಿಸುವುದಷ್ಟೆ ಈ ರಾಜೀನಾಮೆಯ ಹಿಂದಿರುವ ತತ್ವ. ಈ ತತ್ವದ ಆಧಾರದ ಮೇರೆಗೆ ರೈಲ್ವೆ ದುರಂತ ಸಂಭವಿಸಿದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲೂ ಕಾರಣರಾಗದ ಲಾಲ್ ಬಹದ್ದೂರ್ ಶಾಸ್ತ್ರಿಯವರು ತಾವು ನಿರ್ವಹಿಸುತ್ತಿದ್ದ ರೈಲ್ವೆ ಖಾತೆಗೆ ರಾಜೀನಾಮೆ ಕೊಟ್ಟ ಪ್ರಸಂಗ ಇದಕ್ಕೊಂದು ದೊಡ್ಡ ಮೇಲ್ಪಂಕ್ತಿ. ೧೯೬೦ರ ದಶಕದಲ್ಲಿ ಮಧುಗಿರಿ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಗುಂಡೇಟಿಗೆ ರೈತರು ಬಲಿಯಾದ ಪ್ರಸಂಗವನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷದ ಮುಖಂಡರಾದ ಶಾಂತವೇರಿ ಗೋಪಾಲಗೌಡ ಮೊದಲಾದವರು ಪ್ರಸ್ತಾಪಿಸಿದಾಗ ಮರುಮಾತಾಡದೇ ತಮ್ಮ ಸ್ಥಾನಕ್ಕೆ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಗೃಹ ಮಂತ್ರಿ ಎಂ.ವಿ. ರಾಮರಾವ್ ಸದನದಲ್ಲಿಯೇ ರಾಜೀನಾಮೆ ಕೊಟ್ಟ ಪ್ರಸಂಗವೂ ಅಷ್ಟೆ. ೧೯೮೦ರ ದಶಕದಲ್ಲಿ ಸಾರಾಯಿ ಬಾಟ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿಗೆ ತಲೆಬಾಗಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗವೂ ಕೂಡಾ ಕಡಿಮೆ ತೂಕದ್ದಲ್ಲ.
ಅಷ್ಟೇ ಏಕೆ, ೧೯೯೦ರ ದಶಕದಲ್ಲಿ ವೀರಪ್ಪ ಮೊಯ್ಲಿ ಅವರ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಎಚ್.ಎಂ. ರೇವಣ್ಣ ಅವರು ೧೯೮೪ರಲ್ಲಿ ನಡೆದ ಲೋಕಸಭಾ ಚುನಾವಣೆಯ ಅಕ್ರಮಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಆರೋಪಿಯಾಗಿದ್ದ ವಿಚಾರವನ್ನು ಸಂಯುಕ್ತ ಕರ್ನಾಟಕ ಪತ್ರಿಕೆ ಬೆಳಕಿಗೆ ತರುತ್ತಿದ್ದಂತೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆಳವಣಿಗೆ ರಾಜಕಾರಣದಲ್ಲಿ ಮೌಲ್ಯಾಧಾರಿತ ನಡವಳಿಕೆ ಚಾಲ್ತಿಯಲ್ಲಿದೆ ಎಂಬುದಕ್ಕೆ ಸಾಕ್ಷಿ. ಮೌಲ್ಯಾಧಾರಿತ ರಾಜಕಾರಣದ ಅಧ್ಯಾಯಗಳಂತೆ ಕಂಡುಬರುವ ಮೇಲಿನ ಪ್ರಸಂಗಗಳು ಯಾವತ್ತಿಗೂ ಕೂಡಾ ಜನಮಾನಸದಲ್ಲಿ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತಹ ಸತ್ವ ಉಳ್ಳವು. ವಾಲ್ಮೀಕಿ ಅಭಿವೃದ್ಧಿ ನಿಗಮದ ೮೭ ಕೋಟಿ ರೂಪಾಯಿ ಅಕ್ರಮಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಕಲ್ಯಾಣ ಖಾತೆ ಸಚಿವ ನಾಗೇಂದ್ರ ಅವರ ಮೇಲೆ ಸಂಶಯದ ಕತ್ತಿ ತೂಗಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಿಶ್ವಾಸಾರ್ಹತೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸಾಧುವಾದ ಮಾರ್ಗ. ಪ್ರಕರಣದ ಸಿಐಡಿ ತನಿಖೆ ಮುಕ್ತಾಯಗೊಂಡು ನಿರಪರಾಧಿ ಎಂಬುದು ತನಿಖೆಯಲ್ಲಿ ಖಚಿತವಾದ ನಂತರ ಮತ್ತೆ ಸಂಪುಟಕ್ಕೆ ಮರು ಸೇರ್ಪಡೆಯಾಗುವುದರಲ್ಲಿ ಯಾವ ಅಭ್ಯಂತರವೂ ಇರಲಾರದು. ಹಿಂದೆ ಇಂತಹ ಪ್ರಸಂಗಗಳು ಜರುಗಿದಾಗ ರಾಜೀನಾಮೆ ಕೊಟ್ಟವರೆಲ್ಲ ಮತ್ತೆ ಸಂಪುಟಕ್ಕೆ ಮರು ಸೇರ್ಪಡೆಯಾಗಿರುವ ಪ್ರಸಂಗಗಳು ವಾಜಪೇಯಿ ಸಂಪುಟದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರಿಂದ ಹಿಡಿದು ಈ ಹಿಂದೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಗೃಹ ಮಂತ್ರಿಯಾಗಿದ್ದ ಕೆ.ಜೆ. ಜಾರ್ಜ್ ಅವರವರೆಗೆ ಜರುಗಿವೆ. ಇಂತಹ ಮೌಲ್ಯಾಧಾರಿತ ಕ್ರಮಗಳು ಅಧಿಕಾರಸ್ಥರ ವ್ಯಕ್ತಿತ್ವದ ವರ್ಚಸ್ಸನ್ನು ವೃದ್ಧಿಸುತ್ತವೆಯೇ ವಿನಃ ಯಾವುದೇ ಕಾರಣಕ್ಕೆ ಕುಗ್ಗಿಸುವುದಿಲ್ಲ. ಹಾಗೊಮ್ಮೆ ಅಧಿಕಾರಕ್ಕೆ ಅಂಟಿಕೊಂಡದ್ದೇ ಆದರೆ ಸಂಶಯದ ಪಿಶಾಚಿಗಳ ಚೇಷ್ಟೆಯ ಪರಿಣಾಮ ನಿತ್ಯ ನಿರಂತರ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿದ್ದ ಕೆ.ಎಸ್. ಈಶ್ವರಪ್ಪನವರ ಮೇಲೆ ಗುತ್ತಿಗೆದಾರನ ನಿಗೂಢ ಆತ್ಮಹತ್ಯೆಯ ಪ್ರಸಂಗದ ಶಂಕೆ ಕೇಳಿಬಂದಾಗ ರಾಜೀನಾಮೆ ಕೊಟ್ಟು ಅಧಿಕಾರದಿಂದ ದೂರ ಉಳಿದಿದ್ದರು. ತನಿಖೆ ಮುಗಿದ ನಂತರವೂ ಈಶ್ವರಪ್ಪನವರು ಸಂಪುಟಕ್ಕೆ ಮರು ಸೇರ್ಪಡೆಯಾಗಲು ಪರಿಸ್ಥಿತಿ ಅವಕಾಶ ಕೊಡಲಿಲ್ಲ ಎಂಬುದು ಬೇರೆಯೇ ಮಾತು. ಏನೇ ಆದರೂ ಈಶ್ವರಪ್ಪನವರ ಆಗಿನ ರಾಜೀನಾಮೆ ವರ್ತನೆಯಿಂದ ಅವರ ವ್ಯಕ್ತಿತ್ವದ ಘನತೆ ಹೆಚ್ಚಿದ್ದು ಖಂಡಿತ. ಈಗಲೂ ಅಷ್ಟೆ. ನಾನಾ ರೀತಿಯ ಸಂಶಯಗಳಿಗೆ ವಿವರಣೆ ಕೊಡುವ ಬದಲಿಗೆ ಸಿಐಡಿ ತನಿಖೆ ಮುಕ್ತಾಯವಾಗಿ ನಿರ್ದೋಷಿ ಎಂಬುದು ಸಾಬೀತಾಗುವವರೆಗೆ ಸಚಿವ ನಾಗೇಂದ್ರ ಅವರು ಅಧಿಕಾರದಿಂದ ದೂರ ಉಳಿಯುವುದು ನಿಜವಾದ ಅರ್ಥದಲ್ಲಿ ರಾಜಮಾರ್ಗ.
ಆರೋಪಗಳ ಸುರಿಮಳೆ ನಡುವೆಯೂ ಹಠಮಾರಿ ಧೋರಣೆ ತಳೆದು ಅಧಿಕಾರದಲ್ಲಿ ಮುಂದುವರಿದ ಮಂತ್ರಿಗಳ ಪ್ರಸಂಗಗಳು ಸಾಕಷ್ಟಿರಬಹುದು. ಆದರೆ, ಅವೆಲ್ಲವೂ ಕೂಡಾ ಎಚ್ಚರಿಕೆಯ ಗಂಟೆಗಳು. ಮೌಲ್ಯಾಧಾರಿತ ರಾಜಕಾರಣ ಯಾವತ್ತಿಗೂ ನಿರೀಕ್ಷಿಸುವುದು ಜನಾದೇಶದ ಮೂಲಕ ಅಧಿಕಾರ ವಹಿಸಿಕೊಂಡವರು ಸೀಜರನ ಹೆಂಡತಿಯಂತೆ ಸಂಶಯಾತೀತಳಾಗಿರಬೇಕು ಎಂಬ ತಾತ್ವಿಕ ನೆಲೆಗಟ್ಟು ಬಹುಶಃ ಸಚಿವ ನಾಗೇಂದ್ರ ಅವರಿಗೆ ಅರ್ಥವಾಗುತ್ತದೆ ಎಂಬುದು ಜನರ ನಂಬಿಕೆ.