ಮಕ್ಕಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ

Advertisement

ಬೆಳಗಾವಿ: ಒಂದು ಶ್ರೇಷ್ಠ ದೇಶ ಕಟ್ಟಬೇಕೆಂದರೆ ಮಕ್ಕಳು, ನೀರು, ಪರಿಸರ ಅತ್ಯವಶ್ಯಕ. ಅವುಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ದೇಶದ ನ್ಯಾಯಾಲಯದ ಆಜ್ಞೆಯಂತೆ ಎಲ್ಲ ಇಲಾಖೆ ಸಹಯೋಗದೊಂದಿಗೆ ಮಾತ್ರ ಇವುಗಳನ್ನು ರಕ್ಷಣೆ ಮಾಡಲು ಸಾದ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ “ಬಾಲನ್ಯಾಯ (ಅರೈಕ ಮತ್ತು ರಕ್ಷಣೆ) ಕಾಯ್ದೆ-೨೦೧೫, ಆರ್.ಟಿ.ಇ ಕಾಯ್ದೆ-೨೦೦೯ ಹಾಗೂ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ(ಪೋಕ್ಸೊ) ೨೦೧೨ರ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲಗಾ ಗ್ರಾಮ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣೆ ಕುರಿತು ಯಾವುದೇ ಸಮಿತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಕ್ರಮಗಳು ನಡೆದಿರುವುದಿಲ್ಲ ಎಂಬ ಮಾಹಿತಿ ಇದೆ. ಆದ್ದರಿಂದ ಇಂತಹ ಗ್ರಾಮ ಪಂಚಾಯತಿಗಳಲ್ಲಿ ಹೆಚ್ಚಿನ ಕ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದರೂ ಕೂಡಾ ಸರಿಯಾದ ಸಮಯಕ್ಕೆ ಹೋಗಿ ತಡೆಗಟ್ಟುವ ಕೆಲಸ ಆಗುತ್ತಿಲ್ಲ. ಅದಕ್ಕೆ ತಹಶೀಲ್ದಾರ್ ಒಳಗೊಂಡಂತೆ ತಾಲೂಕ ಮಟ್ಟದಲ್ಲಿ ಸಭೆ ನಡೆಸಿ ಬಾಲ್ಯ ವಿವಾಹ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ರಾಜ್ಯ ಮಕ್ಕಳ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ತಿಪ್ಪೇಸ್ವಾಮಿ ಕೆ.ಟಿ. ವೆಂಕಟೇಶ, ಮಂಜುಳಾ, ಅಪರ್ಣಾ ಕೊಳ್ತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಳೇದ, ನಗರ ಉಪ ಪೊಲೀಸ್ ಆಯುಕ್ತೆ ಸ್ನೇಹಾ ಆರ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನ್ನಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾಗರಾಜ್ ಆರ್, ಜಿಲ್ಲಾ ಮಕ್ಕಳ ಸಂರಕ್ಷಣೆ ಅಧಿಕಾರಿ ಮಾಂತೇಶ್ ಭಜಂತ್ರಿ ಉಪಸ್ಥಿತರಿದ್ದರು.