ಮತ್ತೆ ಕಾರ್ಯಾರಂಭಗೊಂಡ ಮಹಿಷವಾಡಗಿ ಸೇತುವೆ..!

Advertisement

ಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ರಬಕವಿ-ಬನಹಟ್ಟಿ ಜಾಕವೆಲ್‌ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ಜನೇವರಿ ೨೨ ರಿಂದ ತಾತ್ಕಾಲಿಕ ಸ್ಥಗಿತಗೊಂಡಿತ್ತು.
ಬುಧವಾರ ಮತ್ತೇ ಕಾರ್ಯಾರಂಭಗೊಂಡ ಕಾರಣ ಈ ಭಾಗದ ಜನರ ಮೊಗದಲ್ಲಿ ಮತ್ತೇ ಮಂದಹಾಸ ಮೂಡುವಲ್ಲಿ ಕಾರಣವಾಗಿದೆ. ೨೦೧೮ ರಲ್ಲಿ ಅಂದಿನ ಸಚಿವೆ ಉಮಾಶ್ರೀಯವರು ೩೦ ಕೋಟಿ ರೂ.ಗಳಷ್ಟು ಟೆಂಡರ್ ಕಾಮಗಾರಿ ಮೂಲಕ ನಾಗಾರ್ಜುನ ಕನಸ್ಟçಕ್ಷನ್ಸ್ ಕಂಪನಿಗೆ ನೀಡಿತ್ತು. ಕಳೆದ ಐದು ವರ್ಷಗಳಲ್ಲಿ ಕೇವಲ ಶೇ.೨೫ ರಷ್ಟು ಮಾತ್ರ ಕಾಮಗಾರಿ ನಡೆದಿದೆ.
ಇದಕ್ಕೆ ಪೂರಕವಾಗಿ ೨೦೨೧ ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಹಾಲಿ ಶಾಸಕ ಸಿದ್ದು ಸವದಿ ಈ ಟೆಂಡರ್ ಕಾಮಗಾರಿಯನ್ನು ೫೦ ಕೋಟಿ ರೂ.ಗಳವರೆಗೆ ಹೆಚ್ಚಳಗೊಳಿಸುವ ಮೂಲಕ ಕಾಮಗಾರಿ ಮತ್ತಷ್ಟು ಒಳ್ಳೆಯ ಹಾಗು ವಿಸ್ತರಣೆಯಾಗಲೆಂದು ಸರ್ಕಾರದಿಂದ ಅನುಮೋದನೆ ಮಾಡಿದ್ದರು.
ಇದೀಗ ಜನೇವರಿ ೨೨ ರಿಂದ ಸಹ ಗುತ್ತಿಗೆಯನ್ನು ಪಡೆದಿರುವ ತೇಜಸ್ ಕನಸ್ಟçಕ್ಷನ್ಸ್ ಕಂಪನಿಯು ಕಾಮಗಾರಿ ಸ್ಥಗಿತಗೊಳಿಸುವ ಮೂಲಕ ಅಲ್ಲಿಂದ ಕಾಮಗಾರಿಗೆ ಸಂಬಂಧಿಸಿದ ಯಂತ್ರಗಳೆಲ್ಲವನ್ನೂ ಸ್ಥಳಾಂತರಗೊಳಿಸಿ ಕಾಲ್ಕಿತ್ತಿದ್ದರು.


ಪರಿಹಾರವಿಲ್ಲ: ಸೇತುವೆ ನಿರ್ಮಾಣಕ್ಕಾಗಿ ಸುಮಾರು ನಾಲ್ಕೈದು ಎಕರೆಯಷ್ಟು ಭೂಮಿಯನ್ನು ವಶಪಡಿಸಿಕೊಂಡಿರುವ ಸರ್ಕಾರದಿಂದ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ.
ಈ ಕುರಿತು ಕೃಷಿ ಭೂ ಮಾಲಿಕರು ಸೇತುವೆ ನಿರ್ಮಾಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಈಗಲೂ ಇದ್ಯಾವುದೇ ಪ್ರಕ್ರಿಯೆಗಳು ನಡೆಯದ ಕಾರಣ ನದಿಯೊಳಗೆ ಅಳವಡಿಸಬೇಕಿರುವ ೮ ಪಿಲ್ಲರ್‌ಗಳ ಅಳವಡಿಕೆಗೆ ಸದ್ಯ ಕಾರ್ಯ ಪ್ರವ್ರರ್ತವಾಗಿರುವ ಗುತ್ತಿಗೆದಾರ ಮೊದಲ ಪಿಲ್ಲರ್‌ಗೆ ಕೆಲಸ ಶುರುವಿಟ್ಟಿದ್ದಾರೆ.


ಬೇಸಿಗೆ ಕಾರಣ ನೀರಿಲ್ಲದ ಕಾರಣ ಕಾಮಗಾರಿ ನಡೆಯುತ್ತಿದ್ದು, ಇನ್ನೊಂದು ತಿಂಗಳೊಳಗಾಗಿ ಮತ್ತೇ ನೀರಿನ ಪ್ರಮಾಣ ಹೆಚ್ಚಾದಂತೆ ಕೆಲಸ ಸ್ಥಗಿತಗೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಟೆಂಡರ್ ಕಾರ್ಯದಲ್ಲಿ ವೈಫಲ್ಯ: ಟೆಂಡರ್ ಸಮಯದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಕೃಷ್ಣಾ ನದಿಯಲ್ಲಿನ ನೀರು ಇಲ್ಲದಂತೆ ನಿರ್ಮಿಸಿಕೊಂಡು ಸೇತುವೆಗಳ ಪಿಲ್ಲರ್‌ಗಳನ್ನು ಅಳವಡಿಸುವಂತೆ ಆಗಿದೆ. ಆದರೆ ಸಮೀಪವೇ ಹಿಪ್ಪರಗಿ ಜಲಾಶಯವಿರುವ ಕಾರಣ ವರ್ಷಪೂರ್ತಿ ನೀರು ನದಿಯಲ್ಲಿರುತ್ತದೆ. ನದಿಯಲ್ಲಿ ಸೇತುವೆ ನಿರ್ಮಾಣದ ವೆಚ್ಚದ ವ್ಯವಸ್ಥೆ ಬದಲಿಸಬೇಕಾಗಿದೆ ಎಂಬುದು ಗುತ್ತಿಗೆದಾರನ ಮಾತು.