ಮತ್ಸ್ಯಗಂಧದ ಜತೆ ಗಾಂಜಾ ಘಾಟು

Advertisement

ಚಿತ್ರ: ಮತ್ಸ್ಯಗಂಧ
ನಿರ್ದೇಶನ: ದೇವರಾಜ್ ಪೂಜಾರಿ
ತಾರಾಗಣ: ಪೃಥ್ವಿ ಅಂಬರ್, ಶರತ್ ಲೋಹಿತಾಶ್ವ, ಪ್ರಶಾಂತ್ ಸಿದ್ಧಿ, ಭಜರಂಗಿ ಲೋಕಿ, ರಾಮ್‌ದಾಸ್, ಸತೀಶ್ ಚಂದ್ರ
ರೇಟಿಂಗ್ಸ್: 3

-ಗಣೇಶ್ ರಾಣೆಬೆನ್ನೂರು

ಕಡಲ ಕಿನಾರೆಯ ಸುತ್ತಮುತ್ತ ಪ್ರತಿನಿತ್ಯ ನೂರಾರು ಮಂದಿ ಓಡಾಡುತ್ತಾರೆ… ವ್ಯಾಪಾರ-ವಹಿವಾಟು ಸರ್ವೇ ಸಾಮಾನ್ಯ. ಮೀನುಗಾರಿಕೆಗೆ ಪ್ರಾಮುಖ್ಯತೆ ಕೊಡುವ ಜನರ ಕೈಲಿ ಗಾಂಜಾ ಸರಬರಾಜು ಆಗುವ ಹಂತಕ್ಕೆ ಭೂಗತ ಲೋಕದ ನಂಟು ಅಂಟಿಕೊಂಡಿರುತ್ತದೆ. ಇವೆಲ್ಲದಕ್ಕೂ ಒಂದು ಫುಲ್‌ಸ್ಟಾಪ್ ಇಡುವ ನಿಟ್ಟಿನಲ್ಲಿ ಪೊಲೀಸ್ ಆಫೀಸರ್ ಪರಮ್ (ಪೃಥ್ವಿ ಅಂಬರ್) ಮುಂದಾಗುತ್ತಾರೆ. ಅಲ್ಲಿಂದ ಸಮಾಜಘಾತುಕರನ್ನು ಸದೆಬಡಿಯುವ ಕೆಲಸ ಶುರುವಾಗುತ್ತದೆ.

ಸಾಕಷ್ಟು ಅಡ್ಡಿ ಆತಂಕಗಳು ಎದುರಾದರೂ, ಅದನ್ನೆಲ್ಲ ಎದುರಿಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾನೆ ನಾಯಕ. ಆದರೆ ಕೊನೆಗೊಂದು ಟ್ವಿಸ್ಟ್ ಕೊಟ್ಟು ಎರಡನೇ ಭಾಗಕ್ಕೆ ಲೀಡ್ ನೀಡಿದ್ದಾರೆ ನಿರ್ದೇಶಕ. ಉತ್ತರ ಕನ್ನಡ ಭಾಗದ ಭಾಷೆ, ಹಬ್ಬ-ಆಚರಣೆ, ಸಂಸ್ಕೃತಿ, ಪರಿಸರ ಮುಂತಾದವುಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ದೇವರಾಜ್ ಪೂಜಾರಿ ಸಫಲರಾಗಿದ್ದಾರೆ.

ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಪೃಥ್ವಿ ಅಂಬರ್ ಮಿಂಚು ಹರಿಸಿದ್ದಾರೆ. ಶರತ್ ಲೋಹಿತಾಶ್ವ, ಭಜರಂಗಿ ಲೋಕಿ, ಪ್ರಶಾಂತ್ ಸಿದ್ಧಿ ವಿಭಿನ್ನ ಪಾತ್ರ ಹಾಗೂ ಗೆಟಪ್‌ಗಳ ಮೂಲಕ ಗಮನ ಸೆಳೆಯುತ್ತಾರೆ. ರಾಮ್‌ದಾಸ್ ಹಾಗೂ ಸತೀಶ್ ಚಂದ್ರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ತಾಂತ್ರಿಕವಾಗಿ ಸಿನಿಮಾ ಸದ್ದು ಮಾಡುತ್ತದೆ ಎಂಬುದಕ್ಕೆ ಪ್ರಶಾಂತ್ ಸಿದ್ಧಿ ಸಂಗೀತ ಹಾಗೂ ಪ್ರವೀಣ್ ಛಾಯಾಗ್ರಹಣವೇ ಸಾಕ್ಷಿ. ಕಲಾವಿದರ ಆಯ್ಕೆ, ತಾಂತ್ರಿಕ ಗುಣಮಟ್ಟ, ಲೊಕೇಶನ್ ಎಲ್ಲವೂ ಚಿತ್ರಕ್ಕೆ ಪೂರಕವಾಗಿವೆ.